ಉಡುಪಿ, ನ. 27 (DaijiworldNews/TA): ಶ್ರೀ ಕೃಷ್ಣ ಮಠದ ಕನಕನ ಕಿಂಡಿಗೆ ಸ್ವರ್ಣ ಕವಚ ಅಳವಡಿಕೆ ಮಾಡಲಾಗುತ್ತಿದೆ. ಈ ಚಿನ್ನದ ಕವಚದ ಕನಕನ ಕಿಂಡಿಯಿಂದ ಶ್ರೀ ಕೃಷ್ಣನನ್ನು ನೋಡೋದು ಒಂದು ಭಾಗ್ಯ ಅಂತಾನೆ ಹೇಳಬಹುದು.

ಕನಕನ ಕಿಂಡಿಯಿಂದ ಶ್ರೀ ಕೃಷ್ಣನನ್ನು ನೋಡೋದು ಒಂದು ಭಾಗ್ಯ ಅಂತಾನೆ ಹೇಳಬಹುದು, ಅದರಲ್ಲೂ ಚಿನ್ನದ ಹೊದಿಕೆಯಿರುವ ಕನಕ ಕಿಂಡಿಯಿಂದ ಶ್ರೀ ಕೃಷ್ಣನನ್ನು ನೋಡೋದು ಸೌಭಾಗ್ಯವೇ ಸರಿ. ಮಾಜಿ ಸಚಿವ ಬಿಜೆಪಿ ನಾಯಕ ಪ್ರಮೋದ್ ಮಧ್ವರಾಜ್ ಸೇವಾ ರೂಪದಲ್ಲಿ ಬಂಗಾರದ ಕವಚವನ್ನು ದೇವಳಕ್ಕೆ ನೀಡುತ್ತಿದ್ದು, ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ನ.28ರಂದು ಶ್ರೀ ಕೃಷ್ಣನ ಸನ್ನಿಧಾನಕ್ಕೆ ಆಗಮಿಸಿ ಶ್ರೀಕೃಷ್ಣನಿಗೆ ಸಮರ್ಪಿಸಲಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಗುರುಪುರದಲ್ಲಿ ಸ್ವರ್ಣ ಕವಚವನ್ನು ನಿರ್ಮಾಣ ಮಾಡಲಾಗಿದ್ದು, ನೂತನವಾಗಿ ನಿರ್ಮಾಣ ಮಾಡಿದಂತ ಸ್ವರ್ಣ ಕವಚವನ್ನು ಪ್ರಮೋದ್ ಮಧ್ವರಾಜ್ ಅವರು ತಮ್ಮ ಮನೆಗೆ ಮೊದಲು ಬರಮಾಡಿಕೊಂಡು, ತಮ್ಮ ಮನೆಯಲ್ಲಿರುವ ಗೋ ಶಾಲೆಯಲ್ಲಿ ಸ್ವರ್ಣ ಕವಚಕ್ಕೆ ವಿಶೇಷ ಪೂಜೆ ನೆರವೇರಿಸಿ ಆ ಬಳಿಕ ಶ್ರೀ ಕೃಷ್ಣನಿಗೆ ಸಮರ್ಪಿಸಿದರು.
ಕನಕನ ಕಿಂಡಿಗೆ ಬಂಗಾರದ ಕವಚವನ್ನು ಅಳವಡಿಕೆ ಮಾಡಲಾಗಿದ್ದು ಪ್ರಧಾನಿ ನರೇಂದ್ರ ಮೋದಿ ಅವರು ನ.28ರಂದು ಅದನ್ನು ಉದ್ಘಾಟನೆ ಮಾಡಲಿದ್ದಾರೆ. ಇನ್ನು ಮುಂದೆ ಭಕ್ತರಿಗೆ ಶ್ರೀ ಕೃಷ್ಣನನ್ನು ಬಂಗಾರದ ಕವಚದ ಮೂಲಕ ದರ್ಶನ ಮಾಡುವ ಅವಕಾಶವಿದೆ. ಇದು ನನ್ನ ತಂದೆಯವರ ಆಸೆಯೂ ಆಗಿತ್ತು ಎಂದು ಸಂತಸದ ನುಡಿಗಳನ್ನಾಡಿದ್ದಾರೆ ಮಾಜಿ ಸಚಿವ ಪ್ರಮೋದ್ ಮಧ್ವರಾಜ್. ಒಟ್ಟಾರೆ ಅನೇಕ ಕಡೆಗಳಿಂದ ಬರುವ ಭಕ್ತರಿಗೆ ಚಿನ್ನದ ಹೊದಿಕೆಯಿರುವ ಕನಕನ ಕಿಂಡಿಯಿಂದ ಶ್ರೀ ಕೃಷ್ಣನನ್ನು ನೋಡುವ ಭಾಗ್ಯ ಸಿಕ್ಕಿರುವುದು ಪುಣ್ಯವೇ ಸರಿ.