ಉಡುಪಿ, ನ. 28 (DaijiworldNews/TA): ಪೊಡವಿಗೊಡೆಯನ ನಾಡು ಇಂದು ಪ್ರಧಾನಿಯ ಪ್ರವಾಸದಿಂದ ಕಂಗೊಳಿಸುತ್ತಿದ್ದು, ಶ್ರೀಕೃಷ್ಣ ಮಠ ಮತ್ತು ನಗರದ ಹಲವು ಪ್ರದೇಶ ಕೇಸರಿಮಯವಾಗಿದೆ. ಪ್ರಧಾನಿ ನರೇಂದ್ರ ಮೋದಿ ಇಂದು ಬೆಳಿಗ್ಗೆ ದೆಹಲಿಯಿಂದ ಹೊರಟು ಮಂಗಳೂರಿಗೆ ಆಗಮಿಸಿದ ನಂತರ ಸೇನಾ ಹೆಲಿಕಾಪ್ಟರ್ ಮೂಲಕ ಉಡುಪಿಗೆ ತಲುಪಲಿದ್ದಾರೆ. ಉಡುಪಿಯ ರಥಬೀದಿಯಲ್ಲಿ ಎರಡು ಕಿಲೋಮೀಟರ್ ಉದ್ದದ ರೋಡ್ ಶೋ ಮೂಲಕ ಪ್ರಧಾನಿ ಜನತೆಗೆ ನಮಸ್ಕಾರ ಸಲ್ಲಿಸಲಿದ್ದು, ಸಾವಿರಾರು ಮಂದಿ ಈ ಕ್ಷಣಕ್ಕೆ ಸಾಕ್ಷಿಯಾಗುವ ನಿರೀಕ್ಷೆಯಿದೆ.




ನಗರದಲ್ಲಿ ಪ್ರಧಾನಿ ಭೇಟಿ ಹಿನ್ನೆಲೆಯಲ್ಲಿ 25,000 ಜನರು ಕುಳಿತುಕೊಳ್ಳುವ ಸುಸಜ್ಜಿತ ಪೆಂಡಾಲ್ ನಿರ್ಮಿಸಲಾಗಿದೆ. ವೇದಿಕೆಯನ್ನೇ ಸಂಪೂರ್ಣ ಹವಾನಿಯಂತ್ರಿತ ಮಾಡಲಾಗಿದ್ದು, ಸಾರ್ವಜನಿಕರು ಮತ್ತು ವಿಐಪಿಗಳಿಗೆ ಪ್ರತ್ಯೇಕ ವ್ಯವಸ್ಥೆ ಮಾಡಿದಿದ್ದಾರೆ. ಪೆಂಡಾಲಿನಲ್ಲಿ ಐದು ದೊಡ್ಡ ಫ್ಯಾನ್ಗಳನ್ನು ಅಳವಡಿಸಲಾಗಿದ್ದು, ಕುಡಿಯುವ ನೀರಿನ ವ್ಯವಸ್ಥೆಯನ್ನು ಮಠವೇ ನಿರ್ವಹಿಸುತ್ತಿದೆ. ಭದ್ರತಾ ಕಾರಣಗಳಿಂದ ನೀರಿನ ಬ್ಯಾಗ್, ಬಾಟಲ್ ಹಾಗೂ ತಿಂಡಿ–ತಿನಿಸುಗಳನ್ನು ಒಳಗೆ ತರುವುದನ್ನು ನಿಷೇಧಿಸಲಾಗಿದೆ. ಲಕ್ಷಕಂಠ ಭಗವದ್ಗೀತಾ ಪಠಣ ಸಮಾವೇಶದಲ್ಲಿ ಭಾಗವಹಿಸುವ ಭಕ್ತರಿಗೆ ಬಳಿಕ ಒಂದು ಲಕ್ಷ ಜನರಿಗೆ ಅನ್ನಸಂತರ್ಪಣೆ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ.
ಉಡುಪಿಯಲ್ಲಿ ಪ್ರಧಾನಿ ಮೋದಿಯ ಪ್ರಮುಖ ಕಾರ್ಯಕ್ರಮಗಳು:
-ಪ್ರಧಾನಿ ಮೋದಿ ಇಂದು ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ ಚಿನ್ನದ ಕವಚ ಅಳವಡಿಸಿದ ಕನಕನ ಕಿಂಡಿ ಲೋಕಾರ್ಪಣೆ ಮಾಡಲಿದ್ದಾರೆ.
-ಕನಕದಾಸರ ಗುಡಿ ದರ್ಶನದ ಬಳಿಕ ಅಷ್ಟಮಠಾಧೀಶರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಮಠದಲ್ಲಿ ವೇದ, ಉಪನಿಷತ್ತು ಹಾಗೂ ಗೀತಾ ಪಠಣ ನಡೆಯಲಿದ್ದು, -ಗೀತಾ ಮಂದಿರಕ್ಕೆ ಭೇಟಿ ನೀಡುವ ಪ್ರಧಾನಿ ಅವರು ನೂತನ ಅನಂತಪದ್ಮನಾಭ ಸ್ವಾಮಿ ಪ್ರತಿಮೆಯನ್ನು ಅನಾವರಣಗೊಳಿಸಲಿದ್ದಾರೆ.
-ಧ್ಯಾನ ಮಂದಿರದಲ್ಲಿ ಕ್ಷಣಕಾಲ ಧ್ಯಾನ ಮಾಡಿದ ನಂತರ ಗೀತಾ ಮಂದಿರದಲ್ಲೇ ಲಘು ಉಪಹಾರ ಸ್ವೀಕರಿಸುವ ಕಾರ್ಯಕ್ರಮವೂ ಯೋಜಿಸಲಾಗಿದೆ.
-ಪ್ರಧಾನಿಗೆ ತುಳುನಾಡಿನ ವಿಶೇಷ ಆಹಾರ ಪದಾರ್ಥಗಳನ್ನು ಸಿದ್ಧಪಡಿಸಲಾಗಿದೆ. ಲಕ್ಷಕಂಠ ಭಗವದ್ಗೀತಾ ಸಮಾವೇಶದಲ್ಲಿ ಪ್ರಧಾನಿಯವರು ನೆಲದ ಮೇಲೆಯೇ ಕುಳಿತು ಗೀತೆಯ 10 ಶ್ಲೋಕಗಳನ್ನು ಪಠಿಸಿ ಬಳಿಕ ಜನತೆಗೆ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.
ಪ್ರಧಾನಿ ಭೇಟಿಯನ್ನು ಸ್ವಾಗತಿಸಲು ಮಲ್ಪೆ ಕಡಲ ತೀರದಲ್ಲೂ ವಿಶೇಷ ಸಿದ್ಧತೆ ಕಂಡುಬಂದಿದ್ದು, ಸ್ಯಾಂಡ್ ಆರ್ಟಿಸ್ಟ್ ಹರೀಶ್ ಸಾಗ ಹಾಗೂ ಅವರ ತಂಡ ಮೋದಿಯವರ ಮುಖಚಿತ್ರ ಹಾಗೂ ಶ್ರೀಕೃಷ್ಣನ ಆಕೃತಿಯನ್ನು ಒಳಗೊಂಡ ಆಕರ್ಷಕ ಮರಳು ಶಿಲ್ಪವನ್ನು ನಿರ್ಮಿಸಿದ್ದಾರೆ. ಈ ಕಲಾಕೃತಿಗೆ ಬಣ್ಣ ಬಳಸಿ ವಿಶಿಷ್ಟ ರೂಪ ನೀಡಲಾಗಿದೆ.
ಶ್ರೀಕೃಷ್ಣ ಮಠಕ್ಕೆ ಭೇಟಿ ಕೊಡುವ ಸಂದರ್ಭ ಬಂಗಾರದ ತೀರ್ಥ ಮಂಟಪವನ್ನು ಪ್ರಧಾನಿ ಉದ್ಘಾಟಿಸಲಿದ್ದಾರೆ. ಗರ್ಭಗುಡಿಯ ಹೊರಭಾಗದಲ್ಲಿರುವ ಈ ಮಂಟಪವನ್ನು ಸಂಪೂರ್ಣ ಬಂಗಾರದ ಹಾಳೆಗಳಿಂದ ಅಲಂಕರಿಸಲಾಗಿದ್ದು, ಶಂಖ–ಚಕ್ರ–ಗದಾ–ಪದ್ಮ ಮತ್ತು ಗಜಪಕ್ಷಿ ಅಲಂಕಾರಗಳನ್ನು ನಿಖರವಾಗಿ ರಚಿಸಲಾಗಿದೆ. ತಮಿಳುನಾಡಿನ ಉದ್ಯಮಿ ರವಿ ಶ್ಯಾಮ್, ಸುಗುಣೇಂದ್ರ ತೀರ್ಥ ಸ್ವಾಮೀಜಿಯವರ 50ನೇ ಸನ್ಯಾಸ ದೀಕ್ಷಾ ವರ್ಷಾಚರಣೆಯ ಅಂಗವಾಗಿ ಈ ಮಹಾದಾನವನ್ನು ಸಲ್ಲಿಸಿದ್ದಾರೆ.
ಪ್ರಧಾನಿ ಭೇಟಿ ಹಿನ್ನೆಲೆ ಇಂದು ಉಡುಪಿ, ಮಣಿಪಾಲ ಮತ್ತು ಮಲ್ಪೆ ಠಾಣಾ ವ್ಯಾಪ್ತಿಯ ಅಂಗಳವಾಡಿ, ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಉಡುಪಿ ಕಾರ್ಯಕ್ರಮಗಳನ್ನು ಮುಗಿಸಿದ ಬಳಿಕ ಪ್ರಧಾನಿ ಮೋದಿ ಮಂಗಳೂರಿಗೆ ತೆರಳಿ ಅಲ್ಲಿಂದ ಗೋವಾಕ್ಕೆ ಪ್ರಯಾಣಿಸಿಯು ಶ್ರೀರಾಮ ಮೂರ್ತಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.