ಉಡುಪಿ, ನ. 28 (DaijiworldNews/ TA): ಜಿಲ್ಲೆಯ ಉದ್ಯಾವರದಲ್ಲಿ ಸ್ವಿಗ್ಗಿ ಫುಡ್ ಡೆಲಿವರಿ ಬಾಯ್ ಮೇಲೆ ಬೀದಿ ನಾಯಿಗಳ ದಂಡು ದಾಳಿ ಮಾಡಿದ ಘಟನೆಯು ನಡೆದಿದೆ. ಈ ಭಾಗದ ಮನೆಯೊಂದಕ್ಕೆ ಫುಡ್ ಡೆಲಿವರಿ ಮಾಡಿ ಹಿಂತಿರುಗುತ್ತಿದ್ದ ವೇಳೆ ಬೀದಿ ನಾಯಿಗಳ ದಂಡು ಹಿಂಬಾಲಿಸಿಕೊಂಡು ಬಂದಿದ್ದು, ತನ್ನ ಬೈಕ್ ನ್ನು ನಿಧಾನಗೊಳಿಸಿದ ವೇಳೆಯಲ್ಲಿ ಈತನ ಕಾಲಿಗೆ 3-4 ನಾಯಿಗಳು ಕಚ್ಚಿವೆ.

ಈ ಸಂದರ್ಭ ನಿಯಂತ್ರಣ ಕಳೆದುಕೊಂಡು ಬೈಕ್ ಸಮೇತ ಯುವಕ ರಸ್ತೆಗೆ ಬಿದ್ದಿದ್ದು ಯುವಕ ಗಾಯಗೊಂಡಿರುತ್ತಾರೆ. ಈತ ಬಿದ್ದಲ್ಲಿ ಈತನ ಮೇಲೆ ಮತ್ತೆ ಬೀದಿ ನಾಯಿಗಳು ದಾಳಿಗೆ ಯತ್ನಿಸಿದ್ದು, ಈ ವೇಳೆ ಈತನ ಬೊಬ್ಬೆ ಮತ್ತು ನಾಯಿಗಳ ಬೊಬ್ಬೆಗೆ ಒಟ್ಟಾದ ಸ್ಥಳೀಯ ಮಹಿಳೆಯರು ಬೀದಿ ನಾಯಿಗಳನ್ನು ಗದರಿಸಿ ಓಡಿಸಿದ್ದರಿಂದ ಮತ್ತಷ್ಟು ನಾಯಿ ಕಡಿತದ ಅಪಾಯದಿಂದ ಯುವಕ ಪಾರಾಗಿದ್ದಾನೆ. ಅದೃಷ್ಟವಶಾತ್ ನಾಯಿಗಳು ಈತ ಧರಿಸಿದ್ದ ಶೂ ಗೆ ಕಚ್ಚಿದ್ದರಿಂದ ನಾಯಿ ಕಡಿತದ ಬಹಳ ಗಾಯವಾಗಿಲ್ಲ. ಶೂ ನಾಯಿ ಕಡಿತದಿಂದ ಹರಿದುಹೋಗಿದೆ.
ಸಮಾಜ ಸೇವಕರ ಸಹಕಾರದಿಂದ ರಿಕ್ಷಾದ ಮೂಲಕ ಗಾಯಾಳುವನ್ನು ಉಡುಪಿಯ ಜಿಲ್ಲಾಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸುವಲ್ಲಿ ಸಹಕರಿಸಿದ್ದಾರೆ. ಬೀದಿ ನಾಯಿಯ ದಾಳಿಯ ಘಟನೆಯು ಉದ್ಯಾವರ ಭಾಗದಲ್ಲಿ ಆಗಾಗ್ಗೆ ಸಂಭವಿಸುತ್ತಿದ್ದು ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಮಾಡಲು ಅಂಗನವಾಡಿಗೆ ತೆರಳುತ್ತಿದ್ದ ಬಾಲಕಿ ಗೆ ಬೀದಿ ನಾಯಿ ಕಚ್ಚಿತ್ತು. ಗಂಭೀರ ವಿಷಯದ ಬಗ್ಗೆ ಕೂಡಲೇ ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳು ಬೀದಿ ನಾಯಿಗಳ ಹಾವಳಿಗೆ ಕಡಿವಾಣ ಹಾಕಿ ಸಾರ್ವಜನಿಕರ ರಕ್ಷಣೆಗೆ ಮುಂದಾಗುವಂತೆ ಆಗ್ರಹಿಸುತ್ತಿದ್ದಾರೆ.