ಮಂಗಳೂರು, ಡಿ. 02 (DaijiworldNews/AA): ನಗರದ ನಾಗುರಿ ಮತ್ತು ಜಪ್ಪಿನಮೊಗರು ದೇವಸ್ಥಾನದ ಬಳಿ ಪಾರ್ಕ್ ಮಾಡಲಾಗಿದ್ದ ದ್ವಿಚಕ್ರ ವಾಹನವನ್ನು ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಅಂತಾರಾಜ್ಯ ಆರೋಪಿಗಳನ್ನು ಕಂಕನಾಡಿ ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಕೇರಳದ ವೆಲ್ಲಾಡ್ ಒಟ್ಟತ್ತಾಯಿ ನಿವಾಸಿ ಅಲೆಕ್ಸ್ ಡೊಮಿನಿಕ್ (25) ಮತ್ತು ಕಲ್ಲಿಕೋಟೆಯ ಕುರಚೂರು ನಿವಾಸಿ ಅಮಲ್ ಕೃಷ್ಣ (25) ಎಂದು ಗುರುತಿಸಲಾಗಿದೆ.
ನವೆಂಬರ್ 14ರಂದು ಆರೋಪಿಗಳು ಸ್ನೇಹಿತರನ್ನು ಭೇಟಿ ಮಾಡಲು ಮಂಗಳೂರಿಗೆ ಬಂದಿದ್ದ ಆರೋಪಿಗಳು ಮಂಗಳೂರು ರೈಲ್ವೇ ಜಂಕ್ಷನ್ ಪ್ರದೇಶದ ಸುತ್ತಮುತ್ತ ಓಡಾಡುತ್ತಿದ್ದರು. ನಂತರ ಅವರು ನಾಗುರಿ ಬಸ್ ನಿಲ್ದಾಣದ ಬಳಿ ನಿಲ್ಲಿಸಿದ್ದ ಒಂದು ಸ್ಕೂಟರ್ ಮತ್ತು ಜಪ್ಪಿನಮೊಗರುವಿನಲ್ಲಿರುವ ಆದಿಮಾಯ ದೇವಸ್ಥಾನದ ಬಳಿ ನಿಲ್ಲಿಸಿದ್ದ ಮತ್ತೊಂದು ಸ್ಕೂಟರ್ ಅನ್ನು ಕಳವು ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ವಿಚಾರಣೆ ವೇಳೆ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ. ಆರೋಪಿಗಳು ನವೆಂಬರ್ ೩೦ರಂದು ಮತ್ತೆ ಮಂಗಳೂರಿಗೆ ಬರುತ್ತಿರುವ ಖಚಿತ ಮಾಹಿತಿ ಮೇರೆಗೆ ಪೊಲೀಸರು ಅವರನ್ನು ಬಂಧಿಸಿದ್ದಾರೆ.
ಆರೋಪಿಗಳಿಂದ ಎರಡು ಸ್ಕೂಟರ್ಗಳು ಮತ್ತು ಕೃತ್ಯಕ್ಕೆ ಬಳಸಿದ ಎರಡು ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಆಸ್ತಿಯ ಒಟ್ಟು ಮೌಲ್ಯ ಸುಮಾರು 1,23,000 ರೂ. ಎಂದು ಅಂದಾಜಿಸಲಾಗಿದೆ.