ಉಡುಪಿ, ಡಿ. 02 (DaijiworldNews/AA): ಕರಾವಳಿ ಪ್ರದೇಶದ ಸಮಗ್ರ ಅಭಿವೃದ್ಧಿಗೆ ಒತ್ತು ನೀಡುವ ನಿಟ್ಟಿನಲ್ಲಿ ಪರ್ಯಾಯ ಪುತ್ತಿಗೆ ಮಠವು ಉಡುಪಿ-ಮಂಗಳೂರು ಮೆಟ್ರೋ ಸೇವೆ ಪ್ರಾರಂಭ ಮತ್ತು ಉಡುಪಿಯಲ್ಲಿ ವಿಮಾನ ನಿಲ್ದಾಣ ಸ್ಥಾಪನೆ ಸೇರಿದಂತೆ ಐದು ಪ್ರಮುಖ ಬೇಡಿಕೆಗಳನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಸಲ್ಲಿಸಿದೆ.

ನವೆಂಬರ್ 28 ರಂದು ನಡೆದ ಲಕ್ಷ ಕಂಠ ಗೀತಾ ಪಾರಾಯಣ ಕಾರ್ಯಕ್ರಮದ ಸಂದರ್ಭದಲ್ಲಿ, ಪರ್ಯಾಯ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಹಾಗೂ ಕಿರಿಯ ಶ್ರೀ ಸುಶ್ರೀಂದ್ರ ತೀರ್ಥ ಸ್ವಾಮೀಜಿ ಅವರು ಪ್ರಧಾನಮಂತ್ರಿಯವರಿಗೆ ಈ ಬೇಡಿಕೆಗಳನ್ನು ಸಲ್ಲಿಸಿದರು.
ಸಾರ್ವಜನಿಕ ಸಾರಿಗೆಯನ್ನು ಬಲಪಡಿಸುವ ಸಲುವಾಗಿ, ಅವಳಿ ನಗರಗಳಾದ ಉಡುಪಿ ಮತ್ತು ಮಂಗಳೂರನ್ನು ಸಂಪರ್ಕಿಸುವ ಮೆಟ್ರೋ ಸೇವೆಯನ್ನು ಮಠವು ವಿನಂತಿಸಿದೆ. ಅಲ್ಲದೆ, ಪಡುಬಿದ್ರೆಯ ಬಳಿ ಮೀಸಲಿರಿಸಿದ 1,000 ಎಕರೆ ಜಾಗದಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸ್ಥಾಪಿಸಲು ಪ್ರಸ್ತಾಪಿಸಲಾಗಿದ್ದು, ಇದು ಪ್ರದೇಶದ ವ್ಯಾಪಾರ, ಶಿಕ್ಷಣ, ಆರೋಗ್ಯ ಮತ್ತು ಧಾರ್ಮಿಕ ಪ್ರವಾಸೋದ್ಯಮಕ್ಕೆ ಇತ್ತೇಜನ ದೊರೆಯಲಿದೆ.
ಉಡುಪಿ ಜಿಲ್ಲೆಯು ಸುಮಾರು 100 ಕಿ.ಮೀ ಕರಾವಳಿಯನ್ನು ಮತ್ತು ಮಲ್ಪೆ ಸೇರಿದಂತೆ ಹಲವಾರು ಪ್ರಮುಖ ಬಂದರುಗಳನ್ನು ಹೊಂದಿದೆ. ಈ ನಿಟ್ಟಿನಲ್ಲಿ, ಅಂತರರಾಷ್ಟ್ರೀಯ ಗುಣಮಟ್ಟದ ಬಂದರು ಅಭಿವೃದ್ಧಿಪಡಿಸುವ ಅಗತ್ಯವಿದೆ. ಸಿಆರ್ಝಡ್ ಮಿತಿ ಸಡಿಲಿಕೆಯ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಕೇಂದ್ರಕ್ಕೆ ಒತ್ತಾಯಿಸಲಾಗಿದ್ದು, ಇದು ಕಡಲ ಉತ್ಪನ್ನ ರಫ್ತು ಹೆಚ್ಚಳ, ಪ್ರವಾಸೋದ್ಯಮ ಮತ್ತು ಮೀನುಗಾರಿಕೆ ಕ್ಷೇತ್ರಕ್ಕೆ ಉತ್ತೇಜನ ನೀಡಲು ಸಹಾಯ ಮಾಡುತ್ತದೆ.
ಉಡುಪಿಯು ಶೈಕ್ಷಣಿಕ ಮತ್ತು ತಾಂತ್ರಿಕ ಸಂಸ್ಥೆಗಳ ಕೇಂದ್ರವಾಗಿರುವುದರಿಂದ, ಡಿಜಿಟಲ್ ಇಂಡಿಯಾ ಮತ್ತು ಸ್ಟಾರ್ಟ್ಅಪ್ ಇಂಡಿಯಾ ಉಪಕ್ರಮಗಳ ಅಡಿಯಲ್ಲಿ ಐಟಿ ಪಾರ್ಕ್ ಮತ್ತು ಎಐ ಇನ್ನೋವೇಶನ್ ಪಾರ್ಕ್ ನಿರ್ಮಿಸಬೇಕು. ಕ್ಲೌಡ್ ಕಂಪ್ಯೂಟಿಂಗ್ ಮೂಲಸೌಕರ್ಯ ಅಭಿವೃದ್ಧಿಗೆ ಸಹಕಾರ ನೀಡುವಂತೆ ಮಠವು ಕೋರಿದೆ.
ಇದಲ್ಲದೆ, ಕರಾವಳಿ ಕರ್ನಾಟಕದ ಸಾಂಪ್ರದಾಯಿಕ ಕೋಣಗಳ ಓಟವಾದ ಕಂಬಳಕ್ಕೆ ರಾಷ್ಟ್ರೀಯ ಕ್ರೀಡೆಯ ಸ್ಥಾನಮಾನ ಒದಗಿಸಬೇಕು. ಕೇಂದ್ರದ ವಿವಿಧ ಯೋಜನೆಗಳ ಮೂಲಕ ಹಣಕಾಸಿನ ನೆರವು ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಉತ್ತೇಜನ ನೀಡುವಂತೆ ವಿನಂತಿಸಲಾಗಿದೆ.