ಮಂಗಳೂರು, ಡಿ. 03 (DaijiworldNews/TA): ನಗರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕಾಂಗ್ರೆಸ್ ನಾಯಕರು ಆಗಮಿಸುತ್ತಿದ್ದ ವೇಳೆ ಒಮ್ಮೆ ಡಿ.ಕೆ. ಶಿವಕುಮಾರ್ ಪರ ಕಾರ್ಯಕರ್ತರು ಮತ್ತೊಮ್ಮೆ ಸಿಎಂ ಸಿದ್ದರಾಮಯ್ಯ ಪರ ಕಾರ್ಯಕರ್ತರು ಭಾರೀ ಜೈಕಾರ ಹಾಕಿದ ಘಟನೆ ನಡೆದಿದೆ.


ಕೊಣಾಜೆಯಲ್ಲಿ ನಾರಾಯಣ ಗುರು–ಗಾಂಧಿ ಸಂವಾದ ಶತಮಾನೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ವೇಳೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಸಂದರ್ಭ, ಕಾಂಗ್ರೆಸ್ ಒಳರಾಜಕಾರಣ ಸ್ಪಷ್ಟವಾಗಿ ಹೊರಹೊಮ್ಮಿದೆ. ದೆಹಲಿಯಿಂದ ನೇರವಾಗಿ ಬಂದ ವೇಣುಗೋಪಾಲ್ ಅವರನ್ನು ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹಾಗೂ ಜಿಲ್ಲೆಯ ಕಾಂಗ್ರೆಸ್ ನಾಯಕರು ಸ್ವಾಗತಿಸಿದರು. ವಿಮಾನ ನಿಲ್ದಾಣದಿಂದ ಹೊರಬರುವ ವೇಳೆಯಲ್ಲಿ, ಡಿ.ಕೆ. ಶಿವಕುಮಾರ್ ಪರ ಕಾರ್ಯಕರ್ತರು ಭಾರೀ ಘೋಷಣೆ ಮಾಡುತ್ತಾ ಶಕ್ತಿ ಪ್ರದರ್ಶನ ನಡೆಸಿದರು. ಡಿಕೆಶಿ ಆಪ್ತ ಮಿಥುನ್ ರೈ ಮತ್ತು ಬೆಂಬಲಿಗರ ನೇತೃತ್ವದಲ್ಲಿ “ಡಿ.ಕೆ… ಡಿ.ಕೆ…” ಘೋಷಣೆಗಳು ಸದ್ದು ಮಾಡಿದವು.
ಈ ವೇಳೆ ಕೆ.ಸಿ. ವೇಣುಗೋಪಾಲ್ ಯಾವುದೇ ರಾಜಕೀಯ ಅಭಿಪ್ರಾಯ ನೀಡದೆ, “ಕೊಣಾಜೆಯಲ್ಲಿ ಸಿದ್ದರಾಮಯ್ಯರನ್ನು ಭೇಟಿಯಾಗುತ್ತೇನೆ” ಎಂಬ ನಕಾರಾತ್ಮಕ ಪ್ರತಿಕ್ರಿಯೆ ನೀಡಿದರು. ಇದರಿಂದ, ಡಿಕೆಶಿ ಪರ ಕಾರ್ಯಕರ್ತರ ಘೋಷಣೆ ಹೈಕಮಾಂಡ್ಗೆ ಸಂದೇಶ ತಲುಪಿಸುವ ಉದ್ದೇಶದ್ದು ಎಂಬ ಚರ್ಚೆ ಹೆಚ್ಚಿತು ಎನ್ನಲಾಗಿದೆ.
ಕೆಲವೇ ಗಂಟೆಗಳ ನಂತರ, ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶೇಷ ವಿಮಾನದಲ್ಲಿ ಮಂಗಳೂರಿಗೆ ಆಗಮಿಸಿದರು. ಅವರೊಂದಿಗೆ ಗೃಹ ಸಚಿವ ಡಾ. ಜಿ. ಪರಮೇಶ್ವರ್, ಸತೀಶ್ ಜಾರಕಿಹೊಳಿ, ಜಮೀರ್ ಅಹ್ಮದ್ ಖಾನ್, ಲಕ್ಷ್ಮೀ ಹೆಬ್ಬಾಳ್ಕರ್ ಸೇರಿದಂತೆ ಹಲವಾರು ನಾಯಕರು ಉಪಸ್ಥಿತರಿದ್ದರು. ಸಿದ್ದರಾಮಯ್ಯ ವಿಮಾನ ನಿಲ್ದಾಣದಿಂದ ಹೊರಬಂದು ವಾಹನದತ್ತ ಸಾಗುತ್ತಿದ್ದಂತೆ, ಸಿದ್ದರಾಮಯ್ಯ ಪರ ಕಾರ್ಯಕರ್ತರು “ಸಿದ್ದು… ಸಿದ್ದು… ಪೂರ್ಣಾವಧಿ ಸಿದ್ದು!” ಘೋಷಣೆ ನಡೆಸಿ ಶಕ್ತಿ ಪ್ರದರ್ಶನ ಮಾಡಿದರು.
ಈ ಸಂದರ್ಭ, ಡಿಕೆಶಿ ಮತ್ತು ಸಿದ್ದರಾಮಯ್ಯ ಪರ ಕಾರ್ಯಕರ್ತರ ಎರಡು ಬಣ ಶಕ್ತಿ ಪ್ರದರ್ಶನದಿಂದ ಮಂಗಳೂರು ಏರ್ಪೋರ್ಟ್ ರಾಜ್ಯದ ಕಾಂಗ್ರೆಸ್ ಒಳರಾಜಕಾರಣದ ನೇರ ಸಾಕ್ಷಿ ನೀಡಿದಂತಿತ್ತು ಎನ್ನಲಾಗಿದೆ. ಮೊದಲು ಡಿಕೆಶಿ ಪರ ಕಾರ್ಯಕರ್ತರು ಭಾರೀ ಸಂಖ್ಯೆಯಲ್ಲಿ ಜಮಾವಣೆ ನಡೆಸಿದರೆ, ನಂತರ ಸಿದ್ದರಾಮಯ್ಯ ಪರ ಬೆಂಬಲಿಗರು ಸಮಾನ ಶಕ್ತಿಯಲ್ಲಿ ಪ್ರತಿಘೋಷಣೆ ನಡೆಸಿದರು. ಈ ಘಟನೆಯು ರಾಜ್ಯ ರಾಜಕಾರಣದಲ್ಲಿ ನಡೆಯುತ್ತಿರುವ ಪರಸ್ಪರ ಬಣ ಸ್ಪರ್ಧೆ ಮತ್ತು ಒಳರಾಜಕಾರಣದ ಪ್ರಭಾವವನ್ನು ತೆರೆದ ಪರದೆಯಲ್ಲಿ ಬಿಂಬಿಸಿದಂತಿತ್ತು.