ಸುಳ್ಯ, ಡಿ. 03 (DaijiworldNews/TA): ಹಲವಾರು ವೈಶಿಷ್ಠ್ಯಗಳನ್ನು ಹೊಂದಿರುವ ಹೆಸರಾಂತ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭಕ್ತರಂತೆ ಮೀನುಗಳು ಜಾತ್ರೆ ನೋಡಲು ಬರುವುದು ಇಲ್ಲಿನ ವಿಶಿಷ್ಠತೆಯಾಗಿದೆ. ಕ್ಷೇತ್ರದಲ್ಲಿ ಪ್ರತಿವರ್ಷ ಚಂಪಾ ಷಷ್ಠಿಯಂದು ನಡೆಯುವ ಜಾತ್ರೋತ್ಸವಕ್ಕೆ ಲಕ್ಷಾಂತರ ಮಂದಿ ಭಕ್ತಾಧಿಗಳು ಆಗಮಿಸಿ ಇಲ್ಲಿನ ವೈಭವಕ್ಕೆ ಸಾಕ್ಷಿಯಾಗುತ್ತಾರೆ. ಹಲವು ಪವಾಡಗಳ ನಾಡಾಗಿರುವ ಸುಬ್ರಹ್ಮಣ್ಯದಲ್ಲಿ ಜಾತ್ರೆಯ ಸಂದರ್ಭ ದೇವಾಲಯದ ಕುಮಾರಧಾರ ಸ್ನಾನ ಘಟ್ಟಕ್ಕೆ ಮೀನುಗಳು ಅತಿಥಿಗಳಾಗಿ ಬರುವುದು ಅವುಗಳಲ್ಲಿ ಒಂದಾಗಿದೆ.

ದೇವಸ್ಥಾನದಲ್ಲಿ ಜಾತ್ರೆಯ ಸಂದರ್ಭ ಕೊಪ್ಪರಿಗೆ ಏರುವ ದ್ವಾದಶಿಯಂದು , ದೂರದ ಏನೆಕಲ್ಲು- ಸಂಕಪಾಲ ಸುಬ್ರಹ್ಮಣ್ಯ ದೇವಸ್ಥಾನದ ಮೀನುಗಳು ಇಲ್ಲಿಗೆ ಬರುತ್ತದೆ. ಜಾತ್ರೆ ಮುಗಿಯುವವರೆಗೂ ಇಲ್ಲೇ ಕಂಡು ಬರುವ ಈ ಮೀನುಗಳು ದೇವಸ್ಥಾನದ ಜಾತ್ರೋತ್ಸವದ ಕೊನೆಯಲ್ಲಿ ನಡೆಯುವ ದೈವದ ಕೋಲದ ಬಳಿಕ ತಮ್ಮ ಸ್ವಸ್ಥಾನಕ್ಕೆ ಮರಳುವುದು ಇಲ್ಲಿ ಪ್ರತಿವರ್ಷ ನಡೆಯುವ ವಾಡಿಕೆಯಾಗಿದೆ.
ದೈವವು ನದಿಗೆ ನೈವೇದ್ಯ ಹಾಕಿದ ಬಳಿಕ ಅದನ್ನು ತಿಂದು ಅವುಗಳು ಮತ್ತೆ ಬಂದಲ್ಲಿಗೆ ಮರಳುತ್ತವೆ. ದೇವಸ್ಥಾನದ ಆವರಣದಲ್ಲಿ ಇಂದು ನಡೆದ ಪುರುಷರಾಯ ದೈವದ ಕೋಲದ ಬಳಿಕ ದೈವವು ದೇವಸ್ಥಾನದಿಂದ ಎರಡು ಕಿಲೋಮೀಟರ್ ದೂರದಲ್ಲಿರುವ ಕುಮಾರಧಾರಾ ಸ್ನಾನಘಟ್ಟದ ಬಳಿಗೆ ಬಂದು ದೇವರ ಮೀನುಗಳಿಗೆ ನೈವೇದ್ಯ ಹಾಕುವ ಮೂಲಕ ಜಾತ್ರಾಮಹೋತ್ಸವ ಸಂಪನ್ನಗೊಂಡಿತು.