ಉಡುಪಿ, ಡಿ. 03 (DaijiworldNews/AA): ಮಲ್ಪೆಯಲ್ಲಿರುವ ರಾಜ್ಯದ ಮೊದಲ ಸೀ ವಾಕ್ ನಿರ್ಲಕ್ಷ್ಯಕ್ಕೆ ಒಳಗಾಗಿದ್ದು, ಸೀ ವಾಕ್ನ ಉದ್ದಕ್ಕೆ ಎರಡೂ ಬದಿಗಳಲ್ಲಿ ಕಳೆ ಗಿಡಗಳು ಬೆಳೆದಿವೆ. ಜೊತೆಗೆ ಏರುಪೇರಾಗಿರುವ ಇಂಟರ್ಲಾಕ್ ಟೈಲ್ಸ್ ಮತ್ತು ಒಡೆದ ಗ್ರಾನೈಟ್ಗಳಿಂದ ತುಂಬಿದೆ. ಸಮುದ್ರದ ರಮಣೀಯ ನೋಟವನ್ನು ಆಸ್ವಾದಿಸುವ ಬದಲು, ಪ್ರವಾಸಿಗರು ಈಗ ಜನರು ಎಸೆದ ಪ್ಲಾಸ್ಟಿಕ್ ತ್ಯಾಜ್ಯ, ಖಾಲಿ ಬಾಟಲಿಗಳು ಮತ್ತು ಗುಟ್ಕಾ ಕಲೆಗಳು ಸೇರಿದಂತೆ ಇತರೆ ತ್ಯಾಜ್ಯಗಳನ್ನು ಕಾಣಬಹುದಾಗಿದೆ.












ಪ್ರತಿದಿನ ವಿವಿಧ ಸ್ಥಳಗಳಿಂದ ಅನೇಕ ಭಕ್ತರು ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡುತ್ತಾರೆ. ಶ್ರೀ ಕೃಷ್ಣನ ದರ್ಶನದ ನಂತರ ಮಲ್ಪೆಯತ್ತ ಆಗಮಿಸುತ್ತಾರೆ. ಆದರೆ, ಸೀ ವಾಕ್ನ ಪ್ರಸ್ತುತ ಸ್ಥಿತಿಯು ಅನೇಕ ಪ್ರವಾಸಿಗರಿಗೆ ಅಲ್ಲಿ ಕಾಲಿಡಲು ಸಹ ಹಿಂಜರಿಕೆಯನ್ನುಂಟು ಮಾಡಿದೆ. ನಿರ್ವಹಣಾ ಕೊರತೆ ಜೊತೆಗೆ ತ್ಯಾಜ್ಯಗಳಿಂದ ತುಂಬಿರುವ ಸೀ ವಾಕ್ಗೆ ಪ್ರವಾಸಿಗರು ಭೇಟಿ ನೀಡಲು ಅಸಹ್ಯ ಮೂಡಿಸಿದೆ. "ಇನ್ನೊಮ್ಮೆ ಸೀ ವಾಕ್ಗೆ ಭೇಟಿ ನೀಡುವ ಮೊದಲು ಎರಡು ಬಾರಿ ಯೋಚಿಸುತ್ತೇವೆ" ಎಂದು ಹಲವು ಪ್ರವಾಸಿಗರು ಹೇಳಿದ್ದಾರೆ.
ಪ್ರತಿನಿತ್ಯ ಇಲ್ಲಿ ವಾಯುವಿಹಾರಕ್ಕಾಗಿ ಜನರು ಬೆಳಿಗ್ಗೆ ಮತ್ತು ಸಂಜೆ ವೇಳೆಗೆ ಬರುತ್ತಾರೆ. ನಿತ್ಯ ಪ್ರವಾಸಿಗರಿದ್ದರೂ ವಾರಾಂತ್ಯ ಮತ್ತು ರಜಾದಿನಗಳಲ್ಲಿ ಜನಸಂದಣಿ ಹೆಚ್ಚುತ್ತದೆ. ಮಳೆಗಾಲದಲ್ಲಿ ಚಿಗುರಿದ ಗಿಡಗಳು ಇದೀಗ ಸೀವಾಕ್ನ ಉದ್ದಕ್ಕೂ ಬೆಳೆದು ನಿಂತು ವಿಷಜಂತುಗಳಿಗೆ ವಾಸ ಸ್ಥಾನವಾಗಿದ್ದು, ಪ್ರವಾಸಿಗರು ಇಲ್ಲಿ ಕುಳಿತುಕೊಳ್ಳಲು ಭಯಪಡುವಂತಾಗಿದೆ.
53.5 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿ, 2018 ರಲ್ಲಿ ಉದ್ಘಾಟನೆಗೊಂಡ ಈ ಸೀ ವಾಕ್ ಸುಮಾರು 480 ಮೀಟರ್ ಉದ್ದ ಮತ್ತು 9 ಮೀಟರ್ ಅಗಲವಿದೆ. ಸಮರ್ಪಕ ನಿರ್ವಹಣೆ ಇಲ್ಲದ ಕಾರಣ, ಪ್ಲಾಸ್ಟಿಕ್ ತ್ಯಾಜ್ಯ, ಬಾಟಲಿಗಳು ಮತ್ತು ಇತರೆ ತ್ಯಾಜ್ಯ ಎಲ್ಲೆಡೆ ಬಿದ್ದಿವೆ. ಎರಡೂ ಬದಿಗಳಲ್ಲಿ ನಿರ್ಮಿಸಲಾದ ತಡೆಗೋಡೆಗಳು ಕಾಲಕ್ರಮೇಣ ದುರ್ಬಲಗೊಂಡಿದ್ದು, ತಡೆಗೋಡೆಗಳ ಮೇಲೆ ಹಾಕಲಾದ ಗ್ರಾನೈಟ್ಗಳು ಅಲ್ಲಲ್ಲಿ ಒಡೆದು ಹೋಗಿವೆ. ಇಂಟರ್ಲಾಕ್ ಟೈಲ್ಸ್ಗಳು ಸಹ ಮೇಲೆದ್ದಿದ್ದು, ಪ್ರವಾಸಿಗರು ನಡೆದಾಡಲು ಕಷ್ಟಪಡುವಂತಾಗಿದೆ.
ಈ ಪ್ರದೇಶದಲ್ಲಿ ಕಸ ಹಾಕುವವರ ವಿರುದ್ಧ ಯಾವುದೇ ಕಠಿಣ ಕ್ರಮ ಕೈಗೊಳ್ಳದಿರುವುದರಿಂದ ಮತ್ತಷ್ಟು ಪ್ರೋತ್ಸಾಹ ನೀಡಿದಂತಾಗಿದೆ. ಈ ಹಿಂದೆ ಸುಂದರವಾಗಿದ್ದ ಮಲ್ಪೆ ಸೀವಾಕ್ ಈಗ ಕಸ ವಿಲೇವಾರಿ ಸ್ಥಳವಾಗಿ ಮಾರ್ಪಟ್ಟಿದೆ. ಜೊತೆಗೆ ಪ್ರವಾಸಿ ತಾಣಗಳನ್ನು ಸ್ವಚ್ಛವಾಗಿಡುವುದು ಅಲ್ಲಿಗೆ ಭೇಟಿ ನೀಡುವ ಪ್ರವಾಸಿಗರ ಜವಾಬ್ದಾರಿಯೂ ಆಗಿರುವುದರಿಂದ ಕಸವನ್ನು ಸೂಕ್ತ ಸ್ಥಳದಲ್ಲಿ ಎಸೆಯಬೇಕಿದೆ.
"ಈ ಪ್ರದೇಶವನ್ನು ಹಿಂದೆ ಉತ್ತಮವಾಗಿ ನಿರ್ವಹಿಸಲಾಗುತ್ತಿತ್ತು ಮತ್ತು ಸ್ವಚ್ಛವಾಗಿಡಲಾಗಿತ್ತು. ಆದರೀಗ ನಿರ್ವಹಣೆಯ ಕೊರತೆಯಿಂದಾಗಿ ಸೀವಾಕ್ನ ಸ್ಥಿತಿ ಹದಗೆಟ್ಟಿದೆ. ನನ್ನ ತಂಡವು ಜವಾಬ್ದಾರಿಯನ್ನು ಹೊತ್ತಿದ್ದಾಗ, ನಿಯಮಿತ ಶುಚಿಗೊಳಿಸುವಿಕೆ ನಡೆಯುತ್ತಿತ್ತು, ಆದ್ದರಿಂದ ಸ್ಥಳವು ಸ್ವಚ್ಛವಾಗಿತ್ತು. ಆಗ ಈಗಿರುವುದಕ್ಕಿಂತ ಹೆಚ್ಚು ಪ್ರವಾಸಿಗರು ಇದ್ದರೂ, ನಾವು ಯಾವುದೇ ಕಸವನ್ನು ಬಿಡದೇ, ತಕ್ಷಣವೇ ಪ್ರತಿಯೊಂದು ಕಸವನ್ನು ಸಂಗ್ರಹಿಸಿ ಪುರಸಭೆಯ ಮೂಲಕ ವಿಲೇವಾರಿ ಮಾಡುತ್ತಿದ್ದೆವು" ಎಂದು ಈ ಹಿಂದೆ ಸೀ ವಾಕ್ನ ನಿರ್ವಹಣೆಯನ್ನು ನಿರ್ವಹಿಸುತ್ತಿದ್ದ ವೀರೇಶ್ ತಿಳಿಸಿದ್ದಾರೆ.
ಮಲ್ಪೆ ಸೀ ವಾಕ್ನ ಪ್ರಸ್ತುತ ಸ್ಥಿತಿಯು ಸಾರ್ವಜನಿಕ ಮೂಲಸೌಕರ್ಯಗಳ ನಿರ್ಲಕ್ಷ್ಯದ ಬಗ್ಗೆ ಕಳವಳವನ್ನು ಉಂಟುಮಾಡಿದೆ. ಈ ಹಿಂದೆ ಇದ್ದಂತೆ ಸೀ ವಾಕ್ ಅನ್ನು ಉತ್ತಮವಾಗಿ ನಿರ್ವಹಣೆ ಮಾಡಲು ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕಿದೆ.