ಮಂಗಳೂರು, ಡಿ. 04 (DaijiworldNews/TA): ಆರ್ಥಿಕ, ಸಾಮಾಜಿಕ ನ್ಯಾಯ ಎಲ್ಲರಿಗೂ ಸಿಗದೇ, ಅಸಮಾನತೆ ಹೋಗಲಾಡಿಸದೆ, ಗುಲಾಮಗಿರಿ ವ್ಯವಸ್ಥೆಯನ್ನು ಕಿತ್ತೆಸೆಯದೇ ಸ್ವಾತಂತ್ರ್ಯ ಯಶಸ್ವಿಯಾಗಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಕೇರಳದ ವರ್ಕಲ ಶಿವಗಿರಿ ಮಠ, ಮಂಗಳೂರು ವಿ.ವಿ.ಯ ಬ್ರಹ್ಮಶ್ರೀ ನಾರಾಯಣ ಗುರು ಅಧ್ಯಯನ ಪೀಠದ ಆಶ್ರಯದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಪ್ರಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ 'ಶತಮಾನದ ಮಹಾ ಪ್ರಸ್ಥಾನ ಬ್ರಹ್ಮಶ್ರೀ ನಾರಾಯಣ ಗುರು- ಮಹಾತ್ಮ ಗಾಂಧಿ ಐತಿಹಾಸಿಕ ಸಂವಾದದ ಶತಮಾನೋತ್ಸವ, ಗುರುವಿನ ಮಹಾ ಸಮಾಧಿ ಶತಾಬ್ಧಿ, ಸರ್ವ ಮತ ಸಮ್ಮೇಳನದ ಶತಮಾನೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದೇಶಕ್ಕೆ ಸ್ವಾತಂತ್ರ್ಯ ಬಂದು 79 ವರ್ಷ, ಸಂವಿಧಾನ ಜಾರಿಗೆ ಬಂದು 75 ವರ್ಷಗಳಾದರೂ ಇನ್ನೂ ಗುಲಾಮಗಿರಿ ವ್ಯವಸ್ಥೆ ಬದಲಾಗಿಲ್ಲ. ಪ್ರಬಲ ಸಮುದಾಯದ ವ್ಯಕ್ತಿ ಎದುರಾದಾಗ ಸ್ವಾಮಿ ಎನ್ನುವ, ದಲಿತ ಸಮುದಾಯದ ವ್ಯಕ್ತಿ ಎಷ್ಟೇ ಶ್ರೀಮಂತರಾದರೂ ಅವರನ್ನು ಏಕ ವಚನದಲ್ಲಿ ಮಾತನಾಡಿಸುವ ವ್ಯವಸ್ಥೆ ಈಗಲೂ ಇದೆ. ಇದೇ ಗುಲಾಮಗಿರಿಯ ಸಂಕೇತ. ಇದನ್ನು ಕಿತ್ತೆಸೆಯದೇ ಸ್ವಾಭಿಮಾನ ಮೂಡಿಸಲು ಸಾಧ್ಯವಿಲ್ಲ. ಇದನ್ನೇ ನಾರಾಯಣಗುರುಗಳು ಸಾರಿ ಸಾರಿ ಹೇಳಿದ್ದಾರೆ' ಎಂದರು.