ದಕ್ಷಿಣ ಕನ್ನಡ-ಉಡುಪಿ, ಡಿ. 04 (DaijiworldNews/TA): ಡಿಸೆಂಬರ್ 3 ರಂದು ಸಂಜೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಗುಡುಗು, ಮಿಂಚಿನೊಂದಿಗೆ ಭಾರೀ ಮಳೆ ಸುರಿದಿದೆ. ಮಳೆಯಿಂದ ಹಲವಾರು ಪ್ರದೇಶಗಳಲ್ಲಿ ಸಂಚಾರ, ವಿದ್ಯುತ್ ವ್ಯತ್ಯಯ ಉಂಟಾಗಿ ಜನಜೀವನ ಅಸ್ತವ್ಯಸ್ತವಾದ ಘಟನೆ ನಡೆದಿದೆ.


ಭಾರತೀಯ ಹವಾಮಾನ ಇಲಾಖೆಯ ಪ್ರಕಾರ, ತಮಿಳುನಾಡು-ಪುದುಚೇರಿ ಕರಾವಳಿಯ ಬಳಿ ನೈಋತ್ಯ ಬಂಗಾಳಕೊಲ್ಲಿಯಲ್ಲಿ ಕಡಿಮೆ ಒತ್ತಡದ ಪ್ರದೇಶ ರೂಪಗೊಂಡಿದ್ದು, ವಾಯುಭಾರ ಕುಸಿತದಿಂದ ಕರಾವಳಿ ಕರ್ನಾಟಕದಲ್ಲಿ ಮಳೆ ಆರಂಭವಾಯಿತು ಎನ್ನಲಾಗಿದೆ. ಬಂಟ್ವಾಳ, ಬೆಳ್ತಂಗಡಿ, ಕಡಿರುದ್ಯಾವರ, ಮಂಗಳೂರು, ಪುತ್ತೂರು, ನಿಂತಿಕಲ್ಲು, ಬಡಗನ್ನೂರು, ಬಲ್ನಾಡು, ಉಪ್ಪಿನಂಗಡಿ, ಕಡಬ, ಸುಳ್ಯ, ಸುಬ್ರಹ್ಮಣ್ಯ, ವಿಟ್ಲ ಮತ್ತು ಮಾಣಿಲ ಗ್ರಾಮಗಳಲ್ಲಿ ತುಂತುರು ಮಳೆಯೊಂದಿಗೆ ಗುಡುಗು, ಮಿಂಚು ಮತ್ತು ಭಾರೀ ಗಾಳಿ ಬೀಸಿದೆ.
ಸುಳ್ಯ ತಾಲ್ಲೂಕಿನಲ್ಲಿ, ಅಕೇಶಿಯಾ ಮರಕ್ಕೆ ಸಿಡಿಲು ಬಡಿದು ಸಿಬ್ಬಂದಿ ಆತಂಕಕ್ಕೀಡಾದ ಘಟನೆ ವರದಿಯಾಗಿದೆ. ಜಾಲ್ಸೂರು ಬಳಿಯ ಮಾಣಿ-ಮೈಸೂರು ಹೆದ್ದಾರಿಯಲ್ಲಿ ಭಾರೀ ಮಳೆಯಿಂದ ನೀರು ನಿಂತು ಸಂಚಾರಕ್ಕೆ ತಾತ್ಕಾಲಿಕ ಅಡ್ಡಿ ಉಂಟಾಯಿತು. ಸಂಪಾಜೆ, ಅರಂತೋಡು, ಜಾಲ್ಸೂರು, ಮಂಡೆಕೋಲು, ಬೆಳ್ಳಾರೆ, ನಿಂತಿಕಲ್ಲು, ಪಂಜ, ಗುತ್ತಿಗಾರ್ ಮತ್ತು ಕೊಲ್ಲಮೊಗ್ರು ಪ್ರದೇಶಗಳಲ್ಲಿ ನಿರಂತರ ಮಳೆ ಸುರಿಯಿತು.
ಉಡುಪಿ ಜಿಲ್ಲೆಯಲ್ಲಿ ದಿನವಿಡೀ ಮಳೆಯಿಲ್ಲದಿದ್ದರೂ, ಸಂಜೆ ಪ್ರಾರಂಭವಾದ ಮಳೆ ಒಂದು ಗಂಟೆಯ ಕಾಲ ಮುಂದುವರಿಯಿತು. ಉಡುಪಿ ನಗರ, ಮಣಿಪಾಲ, ಮಲ್ಪೆ, ಕಟಪಾಡಿ, ಕಾಪು, ಕಾರ್ಕಳ, ಹೆಬ್ರಿ, ಬ್ರಹ್ಮಾವರ, ಕುಂದಾಪುರ ಮತ್ತು ಸಿದ್ದಾಪುರ ಪ್ರದೇಶಗಳಲ್ಲಿ ಸಾಧಾರಣದಿಂದ ಭಾರೀ ಮಳೆ ಸುರಿಯಿತು. ಕಾರ್ಕಳ ಹಳ್ಳಿಗಳಲ್ಲಿ ಮಧ್ಯಾಹ್ನ ಮಳೆಯ ಪರಿಣಾಮವಾಗಿ ವಿದ್ಯುತ್ ತಾತ್ಕಾಲಿಕವಾಗಿ ಕಡಿತಗೊಂಡಿದೆ, ಸಿದ್ದಾಪುರದ ಕೆಲವು ಭಾಗಗಳಲ್ಲಿ ಒಣಗಿದ್ದ ಅಡಕೆ ಒದ್ದೆಯಾಗಿ ರೈತರಿಗೆ ತೊಂದರೆ ಉಂಟಾಗಿದೆ. ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆಯಂತೆ, ಗುರುವಾರ ಕರಾವಳಿ ಕರ್ನಾಟಕದಲ್ಲಿ ವ್ಯಾಪಕ ಮಳೆಯು ಮುಂದುವರಿಯಲಿದೆ.