ಬಂಟ್ವಾಳ, ಡಿ. 04 (DaijiworldNews/TA): ವಿಕಾಸಂ ಸೇವಾ ಫೌಂಡೇಶನ್, ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಕ್ಷೇತ್ರ ಸಂಪನ್ಮೂಲ ಕೇಂದ್ರ ಬಂಟ್ವಾಳ ತಾಲೂಕು ಹಾಗೂ ಸಕ್ಷಮ ದಕ್ಷಿಣ ಕನ್ನಡ ಜಿಲ್ಲೆ ಸಂಯುಕ್ತ ಆಶ್ರಯದಲ್ಲಿ ಬಂಟ್ವಾಳದ ಬಿ.ಸಿ.ರೋಡಿನ ಡಾ. ಬಿ.ಆರ್.ಅಂಬೇಡ್ಕರ್ ಭವನದಲ್ಲಿ ವಿಶ್ವ ದಿವ್ಯಾಂಗರ ದಿನಾಚರಣೆ ಕಾರ್ಯಕ್ರಮ ನಡೆಯಿತು.


ಕಾರ್ಯಕ್ರಮವನ್ನು ಸಂಜೀವಿನಿ ಡಿವೈನ್ ಹೋಲಿಸ್ಟಿಕ್ ವೆಲ್ನೆಸ್ ಸೆಂಟರ್ ಮಂಗಳೂರಿನ ರೇವತಿ ಸನಿಲ್ ಉದ್ಘಾಟಿಸಿ ಮಾತನಾಡಿ, ಇಂದು ಸಮಾಜದಲ್ಲಿ ಮೌಲ್ಯಾಧಾರಿತ ಶಿಕ್ಷಣದ ಅಗತ್ಯವಿದೆ. ಸಮಾಜಕ್ಕೆ ಎಲ್ಲರನ್ನೂ ಸಮದೃಷ್ಟಿಯಲ್ಲಿ ಗುರುತಿಸುವ ವಿಕಾಸಂನಂಥ ಸಂಸ್ಥೆಗಳು ಅಗತ್ಯವಿದೆ ಎಂದರು. ಹಿರಿಯ ಪತ್ರಕರ್ತ ಮಲಾರ್ ಜಯರಾಮ ರೈ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಗತ್ತಿನಲ್ಲಿ ಬಹುತ್ವ ಎಂಬುದು ಭಗವಂತನ ಸಂಕಲ್ಪವಾಗಿದೆ. ದಿವ್ಯಾಂಗ ಮಕ್ಕಳಲ್ಲಿ ಮತ್ಸರವಿಲ್ಲ, ಅವರಲ್ಲಿ ನಿರ್ಮಲ ಪ್ರೇಮವಿದೆ.
ಅವರೊಂದಿಗೆ ಬೆರೆಯುವುದು ನಮ್ಮ ಭಾಗ್ಯ, ಎಲ್ಲ ಮಕ್ಕಳೂ ಶುದ್ಧ ಮನಸ್ಸಿನವರಾಗಿದ್ದು, ಅವರಿಗೆ ಸಹಕಾರಿಯಾಗಿ ನಾವು ತೊಡಗಿಸಿಕೊಳ್ಳಬೇಕು ಎಂದರು. ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ಮಾಲತಿ ಕೆ, ಕ್ಷೇತ್ರ ಸಮನ್ವಯಾಧಿಕಾರಿ ವಿದ್ಯಾಕುಮಾರಿ, ಕೆನರಾ ಬ್ಯಾಂಕ್ ನೌಕರರ ಸಂಘದ ಉಪಪ್ರಧಾನ ಕಾರ್ಯದರ್ಶಿ ಲಕ್ಷ್ಮೀಕಾಂತ ನಾಯಕ್ ಕೊಡ್ಮಾಣ್, ದಕ್ಷಿಣ ಕನ್ನಡ ಜಿಲ್ಲೆ ಸಕ್ಷಮದ ಕಾರ್ಯದರ್ಶಿ ಹರೀಶ್ ಪ್ರಭು, ಬಿ.ಸಿ.ರೋಡಿನ ಉದ್ಯಮಿ ನಾರಾಯಣ ಪೆರ್ನೆ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಈ ಸಂದರ್ಭ, ಭಾಗವಹಿಸಿದ ದಿವ್ಯಾಂಗ ಮಕ್ಕಳಿಗೆ ಸಹಕಾರಿಯಾಗುವ ವಸ್ತುಗಳನ್ನು ಒದಗಿಸಲಾಯಿತು.