ಬೆಂಗಳೂರು ಡಿ 11 : ಸಹೋದ್ಯೋಗಿ ಸುನಿಲ್ ಹೆಗ್ಗರವಳ್ಳಿ ಕೊಲೆಗೆ ಸುಪಾರಿ ನೀಡಿದ ಆರೋಪದ ಮೇಲೆ ಬಂಧಿತನಾಗಿರುವ ಪತ್ರಕರ್ತ ರವಿ ಬೆಳಗೆರೆ ಅವರಿಗೆ ಡಿ ೨೨ ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಕೋರ್ಟ್ ಸೋಮವಾರ ಆದೇಶ ನೀಡಿದೆ. ಇಂದು ಬೆಳೆಗೆರೆಯ ಪೊಲೀಸ್ ಕಸ್ಟಡಿ ಅವಧಿ ಅಂತ್ಯಗೊಂಡ ಬಳಿಕ ಸಿಸಿಬಿ ಪೊಲೀಸರು 1ನೇ ಎಸಿಎಂಎಂ ಕೋರ್ಟ್ ಗೆ ಹಾಜರು ಪಡಿಸಿದ್ದರು. ಬೆಳೆಗೆರೆ ಪರ ವಕೀಲರಾದ ದಿನಕರ್ ಅವರು ಕೋರ್ಟ್ ಗೆ ಆಗಮಿಸಲು ತಡವಾಗಿದ್ದ ಹಿನ್ನೆಲೆಯಲ್ಲಿ ವಿಚಾರಣೆ ಆರಂಭಿಸಿದ ಕೆಲ ಹೊತ್ತಿನಲ್ಲಿಯೇ ನ್ಯಾಯಾಧೀಶರು ಸುಮಾರು ಅರ್ಧ ಗಂಟೆಗಳ ಕಾಲ ಮುಂದೂಡಿದ್ದರು. ಎರಡೂ ಕಡೆಯ ವಾದ ಪ್ರತಿವಾದ ಅಲಿಸಿದ ಕೋರ್ಟ್ ಅವರನ್ನು ಪೊಲೀಸ್ ಕಸ್ಟಡಿಗೆ ಬದಲು ನ್ಯಾಯಂಗ ಬಂಧನಕ್ಕೆ ಆದೇಶ ನೀಡಿದರು . ಈ ನಡುವೆ ಬೆಳಗರೆ ಪರ ವಕೀಲರಾದ ದಿನಕರ್ ಸುಮಾರು 60 ಪುಟಗಳ ವೈದ್ಯಕೀಯ ವಿವರಗಳನ್ನು ಸಲ್ಲಿಸಿ ಪರಪ್ಪನ ಅಗ್ರ ಹಾರ ಜೈಲಿನಲ್ಲಿ ಸೂಕ್ತ ವೈದ್ಯಕೀಯ ಸೌಲಭ್ಯ ಒದಗಿಸುವಂತೆ ಮನವಿ ಮಾಡಿದ್ದಾರೆ. ಇದನ್ನು ಪುರಸ್ಕರಿಸಿದ ನ್ಯಾಯಾಲಯ ಸೂಕ್ತ ಚಿಕಿತ್ಸೆ ನೀಡಬೇಕು ಎಂದು ನ್ಯಾಯಾಧೀಶರಾದ ಜಗದೀಶ್ ಪೊಲೀಸರಿಗೆ ಸೂಚನೆ ನೀಡಿದೆ.
ಉಚ್ಚ ನ್ಯಾಯಾಲಯದಲ್ಲಿ ಜಾಮೀನಿಗೆ ಅರ್ಜಿಗೆ ಮನವಿ ಸಲ್ಲಿಸುವ ಇರಾದೆ ಇರೋದ್ರಿಂದ ಇಂದು ಕೇವಲ ವೈದ್ಯಕೀಯ ಸೌಲಭ್ಯಗಳಿಗೆ ಮಾತ್ರ ಮನವಿ ಸಲ್ಲಿಸಲಾಗಿದ್ದು ಮುಂದಿನ ಒಂದೆರಡು ದಿನಗಳ ಒಳಗೆ ಜಾಮೀನು ಅರ್ಜಿ ಸಲ್ಲಿಸಲಾಗುವುದು ಎಂದು ರವಿ ಬೆಳಗರೆ ಪರ ವಕೀಲರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಹೀಗಾಗಿ ಬುಧವಾರದ ಬಳಿಕ ರವಿ ಬೆಳಗರೆ ಅವರ ಜಾಮೀನು ಹೋರಾಟದ ಅಧ್ಯಾಯ ಪ್ರಾರಂಭಗೊಳ್ಳಲಿದೆ.
ಇನ್ನು ಈ ನಡುವೆ ಪತ್ರಕರ್ತ ಸುನಿಲ್ ಹೆಗ್ಗರವಳ್ಳಿ ಅವರ ನಿವಾಸಕ್ಕೆ ಇಬ್ಬರು ಪೇದೆಗಳನ್ನು ಅವರ ಭದ್ರತೆಗಾಗಿ ನೇಮಿಸಲಾಗಿದ್ದು , ಇದಲ್ಲದೆ ಹೆಚ್ಚಿನ ಭದ್ರತೆಗಾಗಿ ಸುನೀಲ್ ಹೆಗ್ಗರವಳ್ಳಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ರಕ್ಷಣೆ ನೀಡುವಂತೆ ಮನವಿ ಸಲ್ಲಿಸಿದ್ದಾರೆ.