ಸುಳ್ಯ, ಡಿ. 15 (DaijiworldNews/AA): ಶೈಕ್ಷಣಿಕ ಪ್ರವಾಸಕ್ಕೆ ಬಂದಿದ್ದ ವಿದ್ಯಾರ್ಥಿಗಳು ರಸ್ತೆ ಬದಿಯಲ್ಲಿ ಕಸ ಎಸೆದ ವಿಡಿಯೋ ವೈರಲ್ ಆದ ಬೆನ್ನಲ್ಲೇ ಆ ಶಾಲೆಯ ಶಿಕ್ಷಕರು ಸ್ಥಳೀಯ ಗ್ರಾಮ ಪಂಚಾಯಿತಿಯನ್ನು ಸಂಪರ್ಕಿಸಿ, ತಾವೇ ಖುದ್ದಾಗಿ ಬಂದು ತ್ಯಾಜ್ಯವನ್ನು ತೆರವುಗೊಳಿಸಿ ದಂಡ ಪಾವತಿಸುವುದಾಗಿ ಭರವಸೆ ನೀಡಿದ ಘಟನೆ ಸಂಪಾಜೆಯಲ್ಲಿ ನಡೆದಿದೆ.

ಡಿಸೆಂಬರ್ 12 ರಂದು ಬೆಳಿಗ್ಗೆ, ಪ್ರವಾಸಕ್ಕೆ ತೆರಳಿದ್ದ ಬೆಳ್ತಂಗಡಿ ತಾಲೂಕಿನ ಶಿಕ್ಷಣ ಸಂಸ್ಥೆಯೊಂದರ ವಿದ್ಯಾರ್ಥಿಗಳು ಊಟದ ನಂತರ ತ್ಯಾಜ್ಯವನ್ನು ಸರಿಯಾಗಿ ವಿಲೇವಾರಿ ಮಾಡುವ ಬದಲು ರಸ್ತೆ ಬದಿಯಲ್ಲಿ ಸುರಿದಿದ್ದಾರೆ ಎಂದು ವರದಿಯಾಗಿದೆ. ಇದನ್ನು ಗಮನಿಸಿದ ಸ್ಥಳೀಯರೊಬ್ಬರು ಹೀಗೆ ಮಾಡದಂತೆ ಶಿಕ್ಷಕರಲ್ಲಿ ಮನವಿ ಮಾಡಿದರೂ, ಧಿಕ್ಕರಿಸಿ ಪ್ರಯಾಣ ಮುಂದುವರೆಸಿದ್ದರು ಎನ್ನಲಾಗಿದೆ.
ಸ್ಥಳೀಯ ನಿವಾಸಿಯೊಬ್ಬರು ಈ ಘಟನೆಯನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಅದು ವೈರಲ್ ಆಗಿದೆ. ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಹಮೀದ್ ಜಿ.ಕೆ. ಅವರು ಸ್ಥಳಕ್ಕೆ ಭೇಟಿ ನೀಡಿ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ.
ಈ ವಿಚಾರ ಶಾಲಾ ಆಡಳಿತ ಮಂಡಳಿಯ ಗಮನಕ್ಕೆ ಬರುತ್ತಿದ್ದಂತೆ, ಅವರು ಗ್ರಾಮ ಪಂಚಾಯಿತಿಯನ್ನು ಸಂಪರ್ಕಿಸಿ, ಸೋಮವಾರದಂದು ಸ್ಥಳಕ್ಕೆ ಬಂದು ಕಸವನ್ನು ತೆರವುಗೊಳಿಸುವುದಾಗಿ ಮತ್ತು ನಿಗದಿತ ದಂಡವನ್ನು ಪಾವತಿಸುವುದಾಗಿ ತಿಳಿಸಿದೆ.