ಮಂಗಳೂರು, ಡಿ. 15 (DaijiworldNews/TA): ದಕ್ಷಿಣ ಕನ್ನಡದ ಕರಾವಳಿ ಭಾಗದಲ್ಲಿ ಪ್ರತಿಯೊಂದು ಕುಟುಂಬದಲ್ಲೂ ಭಿನ್ನ ರೀತಿಯ ಹಳೆಯ ಆಚರಣೆಗಳು ಇವೆ. ಕರಾವಳಿಯ ಜನ ಹಿಂದಿನಿಂದಲೂ ಭತ್ತದ ಕೃಷಿಯನ್ನೇ ನೆಚ್ಚಿಕೊಂಡು ಬಂದಿದ್ದರಾದರೂ ಇತ್ತೀಚೆಗೆ ಭತ್ತದ ಕೃಷಿಯ ಬದಲು ಅಡಿಕೆ, ರಬ್ಬರ್, ಇತರ ವಾಣಿಜ್ಯ ಬೆಳೆಗಳತ್ತ ಮುಖವಾದ ಕಾರಣ, ಹಳೆಯ ಭತ್ತದ ಗದ್ದೆಗಳು ಬಹುತೇಕ ಕಾಣೆಯಾಗುತ್ತಿವೆ. ಈ ಭತ್ತದ ಗದ್ದೆಗಳೊಂದಿಗೆ ಸಂಪರ್ಕವಿರುವ ಕೆಲವು ಸಂಪ್ರದಾಯಗಳು ಸಹ ಮರೆಯಾಗುತ್ತಿರುವುದರಲ್ಲಿ “ಕಂಡ ವಸಾಯಿ” ಕೂಡ ಒಂದು. ಏನಿದು ಕಂಡ ವಸಾಯಿ? ಏನಿದರ ಆಚರಣೆ ಇಲ್ಲಿದೆ ಸಂಪೂರ್ಣ ಮಾಹಿತಿ.

'ಕಂಡ ವಸಾಯಿ' : ಗದ್ದೆಯನ್ನು ತುಳು ಭಾಷೆಯಲ್ಲಿ ಕಂಡ ಎಂದರೆ ಸುತ್ತು ಹಾಕೋದಕ್ಕೆ ತುಳುವಿನಲ್ಲಿ ವಲಸರಿ ಎನ್ನಲಾಗುತ್ತದೆ. ಹಿಂದೆ ಈ ಪದ್ದತಿ ಮನೆ ಮನೆಯ ಗದ್ದೆಗಳಲ್ಲಿ ನಡೆಯುತ್ತಿತ್ತು. ಆದರೆ ಇಂದು ಭತ್ತದ ಗದ್ದೆಗಳು ಆಧುನಿಕ ಶೈಲಿಗೆ ಮಾರುಹೋಗಿ ಮಾಯವಾದ ಕಾರಣ ಗ್ರಾಮದ ಜನರನ್ನ ಸೇರಿಸಿಕೊಂಡು ಒಂದು ಗದ್ದೆಗೆ ಈ ಸಂಪ್ರದಾಯವನ್ನು ಆಚರಿಸಬೇಕಾದ ಅನಿವಾರ್ಯತೆಯೂ ಎದುರಾಗಿದೆ. ಅದರಲ್ಲೂ ಕಂಬಳದ ಗದ್ದೆಯಲ್ಲಿ ಈ ಕಂಡ ವಸಾಯಿಯನ್ನು ಕಡ್ಡಾಯವಾಗಿ ಮಾಡುತ್ತಿದ್ದು, ನಾಟಿ ಮಾಡುವ ಮೊದಲು ಕೋಣಗಳನ್ನ ಗದ್ದೆಯಲ್ಲಿ ಓಡಿಸಲಾಗುತ್ತದೆ. ಆ ಬಳಿಕ ಆ ಗದ್ದೆಯ ಮಧ್ಯೆ ಪೂಕರೆ ಅಥವಾ ಬಾಳೆಗಿಡವನ್ನು ನೆಡುವ ಪದ್ಧತಿಯಿದೆ.
ಗದ್ದೆಯ ಸುತ್ತ ವಿಶೇಷ ಪೂಜೆ: ಗದ್ದೆಯ ಮಧ್ಯದಲ್ಲಿ ಪೂಕರೆ ಅಥವಾ ಬಾಳೆಗಿಡವನ್ನು ನೆಡುವ ಹಿಂದಿನ ರಾತ್ರಿ, ಗದ್ದೆಯ ಸುತ್ತ ವಿಶೇಷ ಪೂಜೆ ನಡೆಯುತ್ತದೆ. ಊರಿನ ಹಿರಿಯರು ಸೇರಿ, ಗದ್ದೆಯ ನಾಲ್ಕು ದಿಕ್ಕುಗಳಲ್ಲಿ ಕೋಲಿನ ಬೆಳಕು (ತುಳುವಿನಲ್ಲಿ ಕೋಲ್ತಿರಿ) ಹಚ್ಚುತ್ತಾರೆ. ಗದ್ದೆಯ ನಾಲ್ಕು ಮೂಲೆಗಳಲ್ಲಿ ಬಾಳೆಎಲೆ, ಹಿಂಗಾರ, ಸ್ವಲ್ಪ ಅಕ್ಕಿ, ನೀರು ಮತ್ತು ಹಾಲನ್ನು ಸುರಿಸಿ ಪೂಜೆ ನೆರವೇರಿಸಲಾಗುತ್ತದೆ. ಹುಣ್ಣಿಮೆಯಂದು ನಡೆಯುವ ಈ ಪೂಜೆ, ಕಂಡ ವಸಾಯಿ ಎಂದೇ ಕರೆಯಲ್ಪಡುವುದು.
ಗದ್ದೆಯ ಮಧ್ಯದಲ್ಲಿ ಪೂಕರೆ ನೆಡುವ ಪದ್ಧತಿ : ಪೂಜೆಯ ನಂತರ ಗದ್ದೆಯ ಮಧ್ಯದಲ್ಲಿ ಪೂಕರೆ ಅಥವಾ ಬಾಳೆಗಿಡಗಳನ್ನು ನೆಟ್ಟು ನಾಟಿ ಪ್ರಕ್ರಿಯೆಯನ್ನು ಪ್ರಾರಂಭಿಸುತ್ತಾರೆ. ಈ ಸಂದರ್ಭದಲ್ಲಿ ಆಯಾ ಗ್ರಾಮಕ್ಕೆ ಸಂಬಂಧಿಸಿದ ದೈವಗಳ ಹಾಜರಾತಿಯೂ ಕಡ್ಡಾಯ. ದಕ್ಷಿಣ ಕನ್ನಡದಲ್ಲಿ ಮೂಲವಾಗಿ ಬ್ರಹ್ಮೆರೆ ದೈವ ಇದ್ದರೆ, ಕೆಲ ಪ್ರದೇಶಗಳಲ್ಲಿ ಅಂಗತ ಪಂಜುರ್ಲಿ ದೈವ ಇದ್ದರೆ, ಅವುಗಳ ಹಾಜರಾತಿಯೂ ಕೂಡ ಈ ಸಂಪ್ರದಾಯಕ್ಕೆ ಸೇರಿಕೊಂಡಿರುತ್ತದೆ. ಆ ದೈವಗಳ ಕೃಪೆಗೆ ಪ್ರಾರ್ಥಿಸಲಾಗುತ್ತದೆ.
ಈ ಸಂಪ್ರದಾಯವು ಇಂದು ಕೆಲವು ಗ್ರಾಮಗಳಲ್ಲಿ ಬಹುತೇಕ ಮರೆಯಾಗಿದ್ದರೂ, ಇನ್ನೂ ಕೆಲವು ಗ್ರಾಮೀಣ ಪ್ರದೇಶಗಳಲ್ಲಿ ಹಳೆಯ ಪರಂಪರೆಯಂತೆ ಆಚರಿಸಿಕೊಳ್ಳಲಾಗುತ್ತಿದೆ. ಇದರಿಂದ ಭತ್ತದ ಗದ್ದೆಗಳ ಹಳೆಯ ಸಂಸ್ಕೃತಿ ಮತ್ತು ಅದಕ್ಕೆ ಸಂಬಂಧಿಸಿದ ಆಚರಣೆಗಳನ್ನು ನೆನಪಿನಲ್ಲಿಡಲು ಸಹಾಯವಾಗುತ್ತಿದೆ. ಆಧುನಿಕ ಶೈಲಿಗೆ ಮಾರುಹೋಗಿರೋ ತಲೆಮಾರಿಗೆ ಇಂತಹ ಸಂಸ್ಕೃತಿಗಳ ಕುರಿತಾದ ನೆನಪುಗಳು ಉಳಿದು ನಿರಂತರ ಆಚರಣೆಗೂ ಬರಲಿ ಹಲೆ ಸಂಪ್ರದಾಯ ಮಾಸದಿರಲಿ ಎಂಬುವುದು ಅನೇಕರ ಆಶಯ.