ಬಂಟ್ವಾಳ, ಡಿ. 15 (DaijiworldNews/AK): ರಸ್ತೆಯನ್ನು ಅಗೆದು ಜಲ್ಲಿ ಹಾಕಿ ಹೋದವರು ಪತ್ತೆಯಿಲ್ಲ, ಡಾಮರುಗಾಗಿ ಕಾದು ಕಾದು ಸುಸ್ತಾದ ರಸ್ತೆಯ ಜಲ್ಲಿಕಲ್ಲುಗಳು ವಾಹನ ಮೇಲೆ ದಾಳಿ ಮಾಡುತ್ತಿದ್ದು, ವಾಹನ ಸವಾರರಿಗೆ ಅಪಾಯದ ಕರೆಗಂಟೆ ಬಾರಿಸಿದೆ.


ಇದು ಬಂಟ್ವಾಳ ಮೂಡಬಿದಿರೆ ರಸ್ತೆಯ ಅಣ್ಣಳಿಕೆಯಿಂದ ಕೊಯಿಲವರೆಗಿನ ಒಂದುಕಾಲು ಕಿ.ಮೀ.ರಸ್ತೆಯ ಪರಿಸ್ಥಿತಿ. ಹೇಳುವವರು ಇಲ್ಲ,ಕೇಳುವರು ಇಲ್ಲ ಅನ್ನುವ ಸ್ಥಿತಿ ಒದಗಿದ್ದು,ಕಳೆದ ಒಂದು ವರಗಷಗಳಿಂದ ಇಲ್ಲಿನ ಜನರು ರಸ್ತೆಯಲ್ಲಿ ಓಡಾಟ ಮಾಡಲು ಸಾಧ್ಯವಾಗದೆ ಪರದಾಡುತ್ತಿದ್ದಾರೆ. Zig-Zag( ತಿರುವು) ರಸ್ತೆಯಾಗಿದ್ದು ನಿತ್ಯ ಸಾವಿರಾರು ವಾಹನಗಳು ಈ ರಸ್ತೆಯಲ್ಲಿ ಓಡಾಟ ನಡೆಸುತ್ತಿದ್ದು ಜನರು ಸಾವಿನ ಭಯದಿಂದ ಸಂಚರಿಸುವಂತಾಗಿದೆ.
ಪಿಡಬ್ಲ್ಯೂ ಇಲಾಖೆಗೆ ಸೇರಿದ ರಸ್ತೆ ಇದಾಗಿದ್ದು, ರಸ್ತೆಯ ಡಾಮರೀಕರಣಕ್ಕಾಗಿ ಅನುದಾನ ಬಿಡುಗಡೆಯಾಗಿದೆ. ಕಾಮಗಾರಿಯೂ ಆರಂಭವಾಗಿದೆ ಆದರೆ ಕಾಮಗಾರಿ ಮುಗಿಯುತ್ತಿಲ್ಲ. ಡಾಮರು ಹಾಕಲೆಂದು ರಸ್ತೆಯನ್ನು ಅಗೆದು ತಿಂಗಳು ಗಳು ಕಳೆದಿವೆಯಾದರೂ ಇನ್ನೂ ಡಾಮರು ಹಾಕಿಲ್ಲ. ಇದ್ದ ರಸ್ತೆಯನ್ನು ಅಗೆದು ಜಲ್ಲಿ ಹಾಕಿ ತಿಂಗಳಾಗುತ್ತಾ ಬಂದಿದ್ದು, ಇನ್ನೂ ದೂಳು ಮಿಶ್ರಿತ ಜಲ್ಲಿ ಕಲ್ಲು ಮೇಲೆ ಡ್ಯಾನ್ಸ್ ಮಾಡುತ್ತಾ ಕುಂಟುತ್ತಾ ,ಉರುಳುತ್ತಾ ಸಾಗಬೇಕಾಗಿರುವ ಸ್ಥಿತಿ ಉಂಟಾಗಿದೆ ಎಂಬ ಆರೋಪ ಇಲ್ಲಿನ ಜನರದ್ದು ಆಗಿದೆ.
ರಸ್ತೆಯ ಬದಿಯ ಮರ ಕಡಿಯಲು ಬಾಕಿ ಇದ್ದು, ವಿದ್ಯುತ್ ಕಂಬಗಳ ಸ್ಥಳಾಂತರ ಬಾಕಿ ಇದ್ದು , ಕೂಡಲೇ ತೆರವು ಕಾರ್ಯ ನಡೆಯಲಿದೆ. ಇಂದು ರಾಯಿಯಲ್ಲಿ ಡಾಮರು ಹಾಕಲಾಗಿದ್ದು ಶೀಘ್ರವೇ ಕಾಮಗಾರಿ ಮುಗಿಯಲಿದೆ ಎಂದು ಪಿ.ಡಬ್ಲೂಡಿ ಇಲಾಖೆಯ ಅಧಿಕಾರಿ ಮಾಹಿತಿ ನೀಡಿದ್ದಾರೆ.