ಮಂಗಳೂರು, ಡಿ. 16 (DaijiworldNews/TA): ತಾಲೂಕಿನ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವೃದ್ಧೆಯೊಬ್ಬರ ಮನೆಗೆ ನುಗ್ಗಿ ಚಿನ್ನ ಹಾಗೂ ನಗದು ದೋಚಿದ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಪ್ರಕರಣದಲ್ಲಿ ಮೂವರು ಆರೋಪಿತರನ್ನು ಬಂಧಿಸಲಾಗಿದ್ದು, ಒಬ್ಬ ಆರೋಪಿ ತಲೆಮರೆಸಿಕೊಂಡಿದ್ದಾನೆ.

ಸುರತ್ಕಲ್ ಸಮೀಪದ ಮುಕ್ಕ ಪ್ರದೇಶದಲ್ಲಿ ವಾಸವಿರುವ ವೃದ್ಧೆ ಜಲಜ ( 85 ವರ್ಷ) ಅವರ ಮನೆಗೆ ನುಗ್ಗಿ ದರೋಡೆ ನಡೆಸಿದ ಘಟನೆ ಡಿಸೆಂಬರ್ 3ರಂದು ನಡೆದಿತ್ತು. ಅಪರಿಚಿತರು ಕುಡಿಯಲು ನೀರು ಬೇಕೆಂದು ಬಾಗಿಲು ತೆರೆಯುವಂತೆ ಹೇಳಿದ್ದು, ಬಾಗಿಲು ತೆಗೆಯದ ಕಾರಣ ಮನೆಯ ಹಂಚು ತೆಗೆದು ಒಳಪ್ರವೇಶಿಸಿದ್ದಾರೆ. ಆರೋಪಿತರು ತುಳುವಿನಲ್ಲಿ ಜೋರಾಗಿ ಬೆದರಿಸಿ, ವೃದ್ಧೆಯ ಕುತ್ತಿಗೆಗೆ ಬೈರಾಸು ಬಿಗಿದು, ಗೋಡ್ರೇಜ್ನಲ್ಲಿದ್ದ ಸುಮಾರು 16 ಗ್ರಾಂ ಚಿನ್ನದ ಸರ, 20 ಗ್ರಾಂ ತೂಕದ ಎರಡು ಚಿನ್ನದ ಬಳೆ, ಹಾಗೂ 14 ಸಾವಿರ ರೂಪಾಯಿ ನಗದು ದೋಚಿ ಪರಾರಿಯಾಗಿದ್ದರು. ಈ ಕುರಿತು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಘಟನೆ ಬಳಿಕ ಕಾರ್ಯಪ್ರವೃತ್ತರಾದ ಪೊಲೀಸರು, ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ, ಶೈನ್ ಎಚ್. ಪುತ್ರನ್ ಅಲಿಯಾಸ್ ಶಯನ್ ಎಂಬಾತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ವಿಚಾರಣೆ ವೇಳೆ, ಈ ದರೋಡೆ ಕೃತ್ಯವನ್ನು ಜೈಸನ್ ಅಲಿಯಾಸ್ ಲೆನ್ಸನ್ ಕಾರ್ಕಳನೊಂದಿಗೆ ನಡೆಸಿರುವುದಾಗಿ ಆತ ಒಪ್ಪಿಕೊಂಡಿದ್ದಾನೆ. ಕಳವಾದ ಚಿನ್ನವನ್ನು ಬೆಂಗಳೂರಿನಲ್ಲಿ ಮಾರಾಟ ಮಾಡಿರುವ ಮಾಹಿತಿ ಆಧರಿಸಿ, ಪೊಲೀಸರು ಬೆಂಗಳೂರಿಗೆ ತೆರಳಿ ವಿನೋದ್ ಅಲಿಯಾಸ್ ಕೋತಿ ಹಾಗೂ ಗಿರೀಶ್ ಅಲಿಯಾಸ್ ಸೈಕಲ್ ಗಿರಿ ಎಂಬವರನ್ನು ಬಂಧಿಸಿದ್ದಾರೆ.
ಆರೋಪಿತರಿಂದ 4 ಲಕ್ಷ 43 ಸಾವಿರ ರೂಪಾಯಿ ಮೌಲ್ಯದ ಚಿನ್ನ, ಕೃತ್ಯಕ್ಕೆ ಬಳಸಿದ ಮೋಟಾರ್ ಸೈಕಲ್, ಮೂರು ಮೊಬೈಲ್ ಫೋನ್ಗಳು ಹಾಗೂ 3 ಸಾವಿರ ರೂಪಾಯಿ ನಗದು ವಶಕ್ಕೆ ಪಡೆಯಲಾಗಿದೆ. ಇನ್ನೊಬ್ಬ ಆರೋಪಿ ಜೈಸನ್ ಅಲಿಯಾಸ್ ಲೆನ್ಸನ್ ಕಾರ್ಕಳ ತಲೆಮರೆಸಿಕೊಂಡಿದ್ದು, ಆತನ ಪತ್ತೆಗೆ ಶೋಧ ಕಾರ್ಯ ಮುಂದುವರಿದಿದೆ. ಆರೋಪಿತರನ್ನು ಡಿಸೆಂಬರ್ 15ರಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.