ಮಂಗಳೂರು, ಡಿ. 25 (DaijiworldNews/AA): ಕಿನ್ನಿಗೋಳಿ ಹಾಗೂ ಬಜಪೆ ಪಟ್ಟಣ ಪಂಚಾಯತ್ಗಳ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ ಸ್ಪಷ್ಟ ಬಹುಮತದೊಂದಿಗೆ ಭರ್ಜರಿ ಗೆಲುವು ದಾಖಲಿಸಿರುವುದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಭಿವೃದ್ಧಿ ಚಿಂತನೆ, ಜನಪರ ಕಾಳಜಿ ಹಾಗೂ ಹಿಂದುತ್ವದ ವಿಚಾರಧಾರೆಯ ಪರವಾಗಿ ಸಂದ ಜಯ. ಈ ಹಿನ್ನಲೆಯಲ್ಲಿ ಮತದಾರರಿಗೆ ನನ್ನ ವಿಶೇಷ ಧನ್ಯವಾದಗಳು ಎಂದು ಸಂಸದ ಕ್ಯಾ. ಬ್ರಿಜೇಶ್ ಚೌಟ ತಿಳಿಸಿದ್ದಾರೆ.

ಚುನಾವಣಾ ಫಲಿತಾಂಶದ ಕುರಿತು ಹರ್ಷ ವ್ಯಕ್ತಪಡಿಸಿರುವ ಸಂಸದರು, "ಈ ಫಲಿತಾಂಶವು ರಾಜ್ಯದ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಹಿಂದೂ ವಿರೋಧಿ ನೀತಿಗಳಿಗೆ ಜನತೆ ನೀಡಿದ ಸ್ಪಷ್ಟವಾದ ಉತ್ತರವಾಗಿದೆ. ಕಾಂಗ್ರೆಸ್ ಸರ್ಕಾರದ ವೈಫಲ್ಯಗಳನ್ನು ಹತ್ತಿರದಿಂದ ಕಂಡ ಜನತೆ ಬಿಜೆಪಿಯ ಸಿದ್ಧಾಂತಕ್ಕೆ ಮನ್ನಣೆ ನೀಡಿದ್ದಾರೆ. ಆ ಮೂಲಕ ಸ್ಥಳೀಯ ಆಡಳಿತದಿಂದ ಹಿಡಿದು, ರಾಜ್ಯ - ರಾಷ್ಟ್ರ ಮಟ್ಟದಲ್ಲೂ ಬಿಜೆಪಿಗೆ ಅಭೂತಪೂರ್ವ ಜನಾದೇಶ ವ್ಯಕ್ತವಾಗುತ್ತಿರುವುದು ಪ್ರಧಾನಿ ಮೋದಿಯವರ ವಿಕಸಿತ ಭಾರತಕ್ಕೆ ಸಂಕಲ್ಪಕ್ಕೆ ಮತ್ತಷ್ಟು ಸ್ಫೂರ್ತಿ ತುಂಬಿದೆ ಎಂದು ಹೇಳಿದ್ದಾರೆ.
ಈ ಗೆಲುವಿನ ಹಿಂದೆ ಅಹರ್ನಿಶಿಯಾಗಿ ಶ್ರಮಿಸಿದ ಸಮಸ್ತ ಕಾರ್ಯಕರ್ತ ಬಂಧುಗಳಿಗೆ, ಮೂಲ್ಕಿ - ಮೂಡುಬಿದ್ರೆ ಕ್ಷೇತ್ರದ ಶಾಸಕರಾದ ಶ್ರೀ ಉಮಾನಾಥ ಕೋಟ್ಯಾನ್, ಬಿಜೆಪಿ ಜಿಲ್ಲಾಧ್ಯಕ್ಷರಾದ ಸತೀಶ್ ಕುಂಪಲ, ಮಂಡಲ ಅಧ್ಯಕ್ಷರಾದ ದಿನೇಶ್ ಪುತ್ರನ್, ಎಲ್ಲಾ ಪದಾಧಿಕಾರಿಗಳು ಹಾಗೂ ಪಾರ್ಟಿಯ ಎಲ್ಲಾ ಪ್ರಮುಖರಿಗೆ ಅಭಿನಂದನೆಗಳು ಮತ್ತು ಧನ್ಯವಾದಗಳನ್ನು ಸಲ್ಲಿಸುವುದಾಗಿ ಕ್ಯಾ. ಚೌಟ ತಿಳಿಸಿದ್ದಾರೆ.