ಸುಳ್ಯ, ಡಿ. 25 (DaijiworldNews/AA): ಸಂಪಾಜೆ ಗ್ರಾಮದ ಕಲ್ಲುಗುಂಡಿ ಕೈಪಡ್ಕ ಎಂಬಲ್ಲಿ ಆಕಸ್ಮಿಕವಾಗಿ ಬಾವಿಗೆ ಬಿದ್ದ ಮಹಿಳೆಯೊಬ್ಬರನ್ನು ಆಟೋ ಚಾಲಕ ಗುರುಪ್ರಕಾಶ್ ಅವರು ರಕ್ಷಿಸಿದ್ದಾರೆ.

ಮಂಗಳವಾರದಂದು ಕೈಪಡ್ಕದಲ್ಲಿ ಮಹಿಳೆಯೊಬ್ಬರು ಆಕಸ್ಮಿಕವಾಗಿ ಬಾವಿಗೆ ಬಿದ್ದಿದ್ದರು. ಈ ಸಂದರ್ಭದಲ್ಲಿ ಅದೇ ರಸ್ತೆಯಲ್ಲಿ ಆಟೋ ಚಾಲನೆ ಮಾಡಿಕೊಂಡು ಹೋಗುತ್ತಿದ್ದ ಗುರುಪ್ರಕಾಶ್ ಅವರಿಗೆ ವಿಷಯ ತಿಳಿದಿದೆ. ಕೂಡಲೇ ಕಾರ್ಯಪ್ರವೃತ್ತರಾದ ಅವರು ಬಾವಿಗೆ ಜಿಗಿದು, ಸ್ಥಳೀಯರ ಸಹಾಯದೊಂದಿಗೆ ಮಹಿಳೆಯನ್ನು ಸುರಕ್ಷಿತವಾಗಿ ಮೇಲೆತ್ತಿದ್ದಾರೆ.
ಬಳಿಕ ಮಹಿಳೆಯನ್ನು ಚಿಕಿತ್ಸೆಗಾಗಿ ಸುಳ್ಯದ ಆಸ್ಪತ್ರೆಗೆ ದಾಖಲಿಸಲಾಗಿದೆ. ಗುರುಪ್ರಕಾಶ್ ಅವರ ಸಮಯಪ್ರಜ್ಞೆಗೆ, ಅವರ ಧೈರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.