ಮಂಗಳೂರು, ಜ. 26 (DaijiworldNews/TA): ಎನ್ಸಿಸಿ ಕೆಡೆಟ್ ಮಂಗಳೂರಿನ ಲಿಶಾ ಡಿ.ಸುವರ್ಣರಿಗೆ ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್ ನೀಡುವ ಅತ್ಯುನ್ನತ ಪ್ರಶಂಸಾ ಗೌರವ ರಕ್ಷಾ ಮಂತ್ರಿ ಕಮೆಂಡೇಷನ್ ಅವಾರ್ಡ್ ಲಭಿಸಿದೆ. ಜ.24ರಂದು ಹೊಸದಿಲ್ಲಿಯ ಆರ್ಡಿಸಿ 2026 ಕ್ಯಾಂಪಸ್ನಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಲಿಶಾರಿಗೆ ಅತ್ಯುನ್ನತ ಪ್ರಶಸ್ತಿ ಪ್ರದಾನ ಮಾಡಿದರು.

ದೇಶದ 6 ಮಂದಿ ಎನ್ಸಿಸಿ ಕೆಡೆಟ್ಗಳಿಗೆ ಈ ಬಾರಿ ಪ್ರಶಸ್ತಿ ನೀಡಲಾಗಿದ್ದು, ಈ ಪೈಕಿ ಲಿಶಾ ಅವರು ನೇವಿ ಪರ ಭಾರತದಲ್ಲಿ ಈ ಗೌರವ ಪಡೆದ ಏಕೈಕ ಎನ್ಸಿಸಿ ಕೆಡೆಟ್ ಆಗಿದ್ದಾರೆ. ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್ನಲ್ಲಿ ಅಸಾಧಾರಣ ನಾಯಕತ್ವ, ಧೈರ್ಯ, ಕರ್ತವ್ಯ ನಿಷ್ಠೆ ಅಥವಾ ಎನ್ಸಿಸಿ ಗೆ ನೀಡಿದ ಗಮನಾರ್ಹ ಕೊಡುಗೆಗಳಿಗಾಗಿ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ.
ಸಾಮಾನ್ಯವಾಗಿ ಗಣರಾಜ್ಯೋತ್ಸವ ಶಿಬಿರದಂತಹ ಕಾರ್ಯಕ್ರಮಗಳಲ್ಲಿ ಈ ವರೆಗೆ ರಕ್ಷಾ ಮಂತ್ರಿ ಕಮೆಂಡೇಷನ್ ಅವಾರ್ಡ್ ಗೌರವವು ಉತ್ತರ ಭಾರತದ ಎನ್ಸಿಸಿ ಕೆಡೆಟ್ಗಳೇ ಆಯ್ಕೆಯಾಗುತ್ತಿದ್ದು, ಇದೇ ಮೊದಲ ಬಾರಿಗೆ ದಕ್ಷಿಣ ಭಾರತದ ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್ನ ಕೆಡೆಟ್ಗೆ ಈ ಗೌರವ ಲಭಿಸಿರುವುದು ವಿಶೇಷ.