ಉಡುಪಿ, ಜ. 27 (DaijiworldNews/AA): ಗ್ರಾಹಕರಿಗೆ ನೀಡಲೆಂದು ಕತ್ತರಿಸಿದ ನಂತರವೂ ಬಂಗುಡೆ ಮೀನೊಂದು ಸಾಯದೇ ಚಡಪಡಿಸುತ್ತಿದ್ದ ಆಶ್ಚರ್ಯಕರ ಘಟನೆ ಉಡುಪಿಯ ಮಲ್ಪೆ ಬಂದರಿನಲ್ಲಿ ವರದಿಯಾಗಿದೆ.

ಗ್ರಾಹಕರೊಬ್ಬರು ಬಂದರಿನಲ್ಲಿ ಮೀನು ಮಾರಾಟ ಮಾಡುತ್ತಿದ್ದ ಮಹಿಳೆಯಿಂದ ಬಂಗುಡೆ ಮೀನುಗಳನ್ನು ಖರೀದಿಸಿ, ಅದನ್ನು ಕತ್ತರಿಸಿ ಕೊಡುವಂತೆ ಕೇಳಿಕೊಂಡಿದ್ದರು. ಅದರಂತೆ ಮಹಿಳೆ ಮೀನನ್ನು ಸ್ವಚ್ಛಗೊಳಿಸಿ, ಕತ್ತರಿಸಿ ಟಬ್ನಲ್ಲಿ ಹಾಕುತ್ತಿದ್ದಾಗ, ಕತ್ತರಿಸಿದ ಮೀನುಗಳಲ್ಲಿ ಒಂದು ಮೀನು ಹಠಾತ್ ಚಲಿಸಲು ಪ್ರಾರಂಭಿಸಿದೆ. ಮೀನು ಇನ್ನೂ ಜೀವಂತವಾಗಿದೆ ಎಂಬಂತೆ ಚಡಪಡಿಸುತ್ತಿರುವುದು ಕಂಡುಬಂದಿದೆ.
ಈ ವಿಚಿತ್ರ ಘಟನೆ ಕಂಡ ಸ್ಥಳದಲ್ಲಿದ್ದ ಜನರು ಮತ್ತು ಮೀನುಗಾರರು ಒಂದು ಕ್ಷಣ ದಂಗಾಗಿದ್ದಾರೆ. ಅಲ್ಲಿ ನೆರೆದಿದ್ದ ಹಲವು ಮಂದಿ ಈ ಅಚ್ಚರಿಯ ಘಟನೆಯನ್ನು ತಮ್ಮ ಮೊಬೈಲ್ ಫೋನ್ಗಳಲ್ಲಿ ಸೆರೆಹಿಡಿದಿದ್ದಾರೆ.
ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ನೆಟ್ಟಿಗರಲ್ಲಿ ಕುತೂಹಲ ಮೂಡಿಸಿದೆ. ಮೀನನ್ನು ಕತ್ತರಿಸಿದ ಮೇಲೂ ಅದು ಹೇಗೆ ಚಲಿಸಲು ಸಾಧ್ಯ ಎಂಬ ಬಗ್ಗೆ ಚರ್ಚೆ ಆರಂಭವಾಗಿವೆ.