ಬಂಟ್ವಾಳ, ಜ. 28(DaijiworldNews/TA): ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಪಾಣೆಮಂಗಳೂರು ಹಾಗೂ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಮಾಜಿ ಸಚಿವ ಬಿ.ರಮಾನಾಥ ರೈ ನೇತೃತ್ವದಲ್ಲಿ ನರೇಗಾ ಬಚಾವೋ ಸಂಗ್ರಾಮ ಕಾರ್ಯಕ್ರಮ ಬಿ.ಸಿ.ರೋಡಿನ ರಕ್ತೇಶ್ವರಿ ದೇವಸ್ಥಾನದ ಸಮೀಪ ನಡೆಯಿತು.




ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ರಮಾನಾಥ್ ರೈ ಅವರು, ಮಹತ್ಮಾ ಗಾಂಧಿಯವರ ಹೆಸರಿನಲ್ಲಿ ಉದ್ಯೋಗ ಖಾತರಿ ಪಡಿಸುವ ಯೋಜನೆ ಗ್ರಾ.ಪಂ. ಮಟ್ಟದಲ್ಲಿ ಬಹಳಷ್ಟು ಬಡವರಿಗೆ ಅನುಕೂಲವಾದ ಯೋಜನೆ. ಯು.ಪಿ.ಎ.ಸರಕಾರದ ನರೇಗಾ ಯೋಜನೆಯಿಂದ ಅನೇಕ ಗ್ರಾ.ಪಂ.ಗಳು ಅಭಿವೃದ್ಧಿ ಹೊಂದಿವೆ. ಯೋಜನೆ ಶಕ್ತಿ ಕಳೆದುಕೊಳ್ಳುವ ಸ್ಥಿತಿ ಉಂಟಾಗಿದ್ದು, ಮಹಾತ್ಮಾ ಗಾಂಧಿ ಹೆಸರು ತೆಗೆಯುವುದರ ಜೊತೆಗೆ ಯೋಜನೆಯ ಮೂಲಸ್ವರೂಪವನ್ನೇ ಬದಲಾಯಿಸುವ ಕಾರ್ಯವನ್ನು ಬಿಜೆಪಿ ಮಾಡಿದೆ ಎಂದು ಆರೋಪಿಸಿದರು.
ಪ್ರತಿಭಟನಾ ಸಭೆಗೆ ಮುನ್ನ ಮಣಿಹಳ್ಳದಿಂದ ಬಿ.ಸಿ.ರೋಡು- ಕೈಕಂಬ ಹಾಗೂ ಕೈಕಂಬದಿಂದ ಬಿ.ಸಿ.ರೋಡಿನ ಮಿನಿವಿಧಾನ ಸೌಧದವರೆಗೆ ಪ್ರತಿಭಟನಾ ಪಾದಯಾತ್ರೆ ನಡೆಯಿತು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಚಂದ್ರಶೇಖರ ಭಂಡಾರಿ, ಬಾಲಕೃಷ್ಣ ಅಂಚನ್, ಕಾಂಗ್ರೆಸ್ ಪ್ರಮುಖರಾದ ಬೇಬಿ ಕುಂದರ್, ಚಂದ್ರಪ್ರಕಾಶ್ ಶೆಟ್ಟಿ, ಎಂ.ಎಸ್.ಮಹಮ್ಮದ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.