ಮಂಗಳೂರು, ಜ. 28(DaijiworldNews/TA): ಸುರತ್ಕಲ್ ರೈಲ್ವೇ ನಿಲ್ದಾಣದಲ್ಲಿ ರೈಲು ಹತ್ತುವ ಧಾವಂತದಲ್ಲಿ ಕೆಳಗೆ ಬೀಳುತ್ತಿದ್ದ ಮಹಿಳೆಯನ್ನು ಪಾಯಿಂಟ್ ಮ್ಯಾನ್ ತಕ್ಷಣ ಹಿಡಿಯುವ ಮೂಲಕ ಆಕೆಯ ಜೀವ ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮಂಗಳವಾರ ಸಂಜೆ 4.30ಕ್ಕೆ ಮಂಗಳೂರಿನಿಂದ ಮಡಗಾಂವ್ಗೆ ಹೊರಟಿದ್ದ 'ಮೆಮು' ಪ್ರಯಾಣಿಕ ರೈಲಿನಲ್ಲಿ ಕುಮಟಾಗೆ ತೆರಳುವ ಮಹಿಳೆಯೊಬ್ಬರು ಆಗಮಿಸಿದ್ದರು. ರೈಲು ಆಗಷ್ಟೇ ಹೊರಟಿದ್ದರಿಂದ ಟಿಕೆಟ್ ಕೂಡ ಮಾಡದೇ, ಓಡಿಕೊಂಡು ಬಂದು ರೈಲು ಹತ್ತುವ ಪ್ರಯತ್ನ ಮಾಡಿದ್ದರು. ರೈಲು ಹತ್ತುವ ಧಾವಂತದಲ್ಲಿ ಕಾಲು ಜಾರಿ ಕೆಳಗೆ ಬೀಳುವಷ್ಟದಲ್ಲಿ ಬಾವುಟ ತೋರಿಸುವ ಪಾಯಿಂಟ್ ಮ್ಯಾನ್ ಕೆಲಸ ಮಾಡುತ್ತಿದ್ದ ಐಸಾಕ್ ತಕ್ಷಣ ಹಿಡಿದು ಮೇಲಕ್ಕೆತ್ತಿದ್ದರು. ಇಲ್ಲದಿದ್ದರೆ ಅವರು ನೇರ ಕೆಳಗೆ ಬಿದ್ದು ಪ್ರಾಣಾಪಾಯಕ್ಕೆ ಸಿಲುಕುತ್ತಿದ್ದರು.
ಇದೇ ಸಂದರ್ಭದಲ್ಲಿ ಕೆಂಪು ಧ್ವಜ ತೋರಿಸಿದ್ದರಿಂದ ರೈಲು ನಿಂತಿತು. ಬಳಿಕ ಮಹಿಳೆ ಅದೇ ರೈಲಿನಲ್ಲಿ ಕುಮಟಾಕ್ಕೆ ತೆರಳಿದರು. ತಕ್ಷಣ ಸಮಯ ಪ್ರಜ್ಞೆ ಮೆರೆದು ಜೀವ ಉಳಿಸಿದ ಐಸಾಕ್ ಅವರನ್ನು ರೈಲ್ವೆ ಇಲಾಖೆ ಅಧಿಕಾರಿಗಳು ಮತ್ತು ಪ್ರಯಾಣಿಕರು ಅಭಿನಂದಿಸಿದರು.