ಬೆಳ್ತಂಗಡಿ, ಜ. 29 (DaijiworldNews/AA): ಬೆಳ್ತಂಗಡಿಯ ಚರ್ಚ್ ರಸ್ತೆಯ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದ ವ್ಯಕ್ತಿಯೊಬ್ಬರು ನಿಗೂಢವಾಗಿ ನಾಪತ್ತೆಯಾಗಿರುವ ಘಟನೆ ವರದಿಯಾಗಿದೆ.

ನಾಪತ್ತೆಯಾದವರನ್ನು ಬಂಟ್ವಾಳ ತಾಲೂಕಿನ ಕುಕ್ಕಿಪಾಡಿ ಗ್ರಾಮದ ಮಾವಿನಕಟ್ಟೆ ದೇವಸ್ಯ ನಿವಾಸಿ ರೋಶನ್ ಕಿರಣ್ ಡಿಸೋಜಾ (36) ಎಂದು ಗುರುತಿಸಲಾಗಿದೆ. ಇವರು ಬೆಳ್ತಂಗಡಿಯ ಚರ್ಚ್ ರಸ್ತೆಯಲ್ಲಿ ಬಾಡಿಗೆ ಮನೆಯಲ್ಲಿದ್ದುಕೊಂಡು, ಪಿಕಪ್ ವಾಹನದ ಚಾಲಕರಾಗಿ ಕೆಲಸ ಮಾಡುತ್ತಿದ್ದರು.
ಬೆಂಗಳೂರಿನಲ್ಲಿದ್ದ ತಮ್ಮ ಪತ್ನಿಗೆ ಕರೆ ಮಾಡಿದ್ದ ರೋಶನ್, ಜನವರಿ 25 ರಂದು ತಾವು ಬೆಂಗಳೂರಿಗೆ ಬರುವುದಾಗಿ ತಿಳಿಸಿದ್ದರು. ಅದರಂತೆ ಅಂದು ಬೆಳಿಗ್ಗೆ ಬೆಂಗಳೂರಿಗೆ ಹೋಗುವುದಾಗಿ ಹೇಳಿ ಬಸ್ ಏರಿದ್ದರು. ಆದರೆ, ಸಂಜೆಯಾದರೂ ಅವರು ಬೆಂಗಳೂರು ತಲುಪಲಿಲ್ಲ ಮತ್ತು ಪತ್ನಿಯ ಫೋನ್ ಕರೆಗಳಿಗೂ ಸ್ಪಂದಿಸಲಿಲ್ಲ. ತದನಂತರ, ತಾವು ಇನ್ನು ಮುಂದೆ ಇರುವುದಿಲ್ಲ ಎಂಬರ್ಥದ ವಾಟ್ಸಾಪ್ ಸಂದೇಶವೊಂದನ್ನು ಪತ್ನಿಗೆ ಕಳುಹಿಸಿದ್ದಾರೆ.
ಸಂದೇಶದಿಂದ ಆತಂಕಗೊಂಡ ಪತ್ನಿ ತಕ್ಷಣ ಬೆಳ್ತಂಗಡಿಗೆ ಧಾವಿಸಿ ಬಾಡಿಗೆ ಮನೆಯನ್ನು ಪರಿಶೀಲಿಸಿದಾಗ ರೋಶನ್ ಅಲ್ಲಿರಲಿಲ್ಲ. ನೆರೆಹೊರೆಯವರಲ್ಲಿ ವಿಚಾರಿಸಿದರೂ ಯಾವುದೇ ಮಾಹಿತಿ ಲಭ್ಯವಾಗದ ಹಿನ್ನೆಲೆಯಲ್ಲಿ ಅವರು ನಾಪತ್ತೆಯಾಗಿರುವುದು ದೃಢಪಟ್ಟಿದೆ.
ಈ ಕುರಿತು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಾಪತ್ತೆಯಾದ ರೋಶನ್ ಕಿರಣ್ ಡಿಸೋಜಾ ಅವರ ಬಗ್ಗೆ ಯಾವುದೇ ಮಾಹಿತಿ ಅಥವಾ ಸುಳಿವು ಸಿಕ್ಕಲ್ಲಿ ತಕ್ಷಣ ಬೆಳ್ತಂಗಡಿ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.