ಮಂಗಳೂರು, ಜ. 29 (DaijiworldNews/AK): ಉದ್ಯೋಗಕ್ಕೆಂದು ತೆರಳಿ ಕಾಂಬೋಡಿಯಾದಲ್ಲಿ ಸೈಬರ್ ವಂಚಕರ ಜಾಲದಲ್ಲಿ ಒತ್ತೆಯಾಳುಗಳಾಗಿ ಸಿಲುಕಿಕೊಂಡಿದ್ದ ಮಂಗಳೂರು ಮೂಲದ ಐವರು ಯುವಕರನ್ನು ರಕ್ಷಿಸಿ ತಾಯ್ನಾಡಿಗೆ ಕರೆತರುವಲ್ಲಿ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರ ಅವಿರತ ಪರಿಶ್ರಮ ಯಶಸ್ಸು ನೀಡಿದೆ.

ಉದ್ಯೋಗದ ಭರವಸೆಯೊಂದಿಗೆ ಕಾಂಬೋಡಿಯಾಗೆ ತೆರಳಿ ಕಳೆದ ಹಲವು ತಿಂಗಳಿನಿಂದ ನರಕಯಾತನೆ ಅನುಭವಿಸುತ್ತಿದ್ದ ಜಿಲ್ಲೆಯ ಐದು ಮಂದಿ ಸೇರಿ ಒಟ್ಟು 37 ಮಂದಿ ಭಾರತೀಯರು ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರದ ಸತತ ಮಧ್ಯಸ್ಥಿಕೆ ಪರಿಣಾಮ ಮಂಗಳವಾರ ಸುರಕ್ಷಿತವಾಗಿ ಸ್ವದೇಶಕ್ಕೆ ವಾಪಾಸ್ಸಾಗಿದ್ದಾರೆ. ಈ ನಿಟ್ಟಿನಲ್ಲಿ ದಕ್ಷಿಣ ಕನ್ನಡದ ಐವರು ಯುವಕರನ್ನು ಊರಿಗೆ ಕರೆತರುವಲ್ಲಿ ಸಂಸದ ಕ್ಯಾ. ಚೌಟ ಅವರು ತಿಂಗಳಿನಿಂದ ವಿದೇಶಾಂಗ ಸಚಿವಾಲಯದ ಮೂಲಕ ಕಾಂಬೋಡಿಯಾ ರಾಜತಾಂತ್ರಿಕ ಇಲಾಖೆಗಳ ಜತೆ ಸಂಪರ್ಕ ಸಾಧಿಸುವಲ್ಲಿ ಮುತುವರ್ಜಿ ವಹಿಸಿದ್ದರು.
ಈ ಬಗ್ಗೆ ಸಂತಸ ಹಂಚಿಕೊಂಡಿರುವ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು, " ಕಾಂಬೋಡಿಯಾದಲ್ಲಿ ಕಳೆದ ಹಲವು ಸಮಯದಿಂದ ಸೈಬರ್ ವಂಚಕರ ಜಾಲತದಲ್ಲಿ ಜೀತದಾಳುಗಳಾಗಿ ಸಿಲುಕಿಕೊಂಡಿದ್ದ ನಮ್ಮ ಊರಿನ ಐದು ಮಂದಿ ಯುವಕರನ್ನು ಸುರಕ್ಷಿತವಾಗಿ ಕರೆತರುವುದಕ್ಕೆ ಸಾಧ್ಯವಾಗಿರುವುದು ಬಹಳ ಸಂತೃಪ್ತಿ ಉಂಟುಮಾಡಿದೆ. ಏಕೆಂದರೆ, ಆ ಜಾಲದಿಂದ ಬಿಡಿಸಿ ಅವರನ್ನು ರಾಜತಾಂತ್ರಿಕ ವ್ಯವಸ್ಥೆಯಡಿ ಸ್ವದೇಶಕ್ಕೆ ಕರೆತರುವುದು ಅಷ್ಟೊಂದು ಸುಲಭವಿರಲಿಲ್ಲ. ಆದರೆ, ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ವಿದೇಶಾಂಗ ಸಚಿವಾಲಯದ ಅಧಿಕಾರಿಗಳ ಮೂಲಕ ಸಂಕಷ್ಟದಲ್ಲಿದ್ದ 37 ಮಂದಿಯನ್ನು ಕರೆತರುವುದಕ್ಕೆ ಎಲ್ಲ ರೀತಿಯಲ್ಲಿಯೂ ಸ್ಪಂದನೆ ನೀಡಿದೆ. ಈ ಹಿನ್ನಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ವಿದೇಶಾಂಗ ಸಚಿವಾಲಯದ ಎಲ್ಲ ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಯುವಕರು ವಿದೇಶಿ ಉದ್ಯೋಗದ ಆಮಿಷಗಳಿಗೆ ಬಲಿಯಾಗಬಾರದು. ಅನಧಿಕೃತ ಕನ್ಸಲ್ಟೆನ್ಸಿಗಳ ಬಗ್ಗೆ ಜಾಗರೂಕರಾಗಿರಬೇಕು ಎಂದಿದ್ದಾರೆ.
ಘಟನೆಯ ಹಿನ್ನಲೆ:
ಮಂಗಳೂರು ಮೂಲದ ಈ ಐವರು ಯುವಕರು ಕನ್ಸಲ್ಟೆನ್ಸಿ ಮೂಲಕ ತಿಂಗಳಿಗೆ ಒಂದು ಲಕ್ಷ ರೂ. ಸಂಬಳದ ಡೇಟಾ ಎಂಟ್ರಿ ಕೆಲಸದ ಭರವಸೆಯೊಂದಿಗೆ ವಿದೇಶಕ್ಕೆ ತೆರಳಿದ್ದರು. ಆದರೆ ವಂಚಕರು ಇವರನ್ನು ಕಾಂಬೋಡಿಯಾಕ್ಕೆ ಕರೆದೊಯ್ದು ಸೈಬರ್ ಅಪರಾಧ ಎಸಗುವ ಸಂಚಿಗೆ ಬಳಸಿಕೊಂಡಿದ್ದರು. ಕಾನೂನುಬಾಹಿರ ಕೆಲಸಕ್ಕೆ ಒಪ್ಪದಿದ್ದಾಗ ಯುವಕರಿಗೆ ಎಲೆಕ್ಟ್ರಿಕ್ ಶಾಕ್ ಹಾಗೂ ದೈಹಿಕ-ಮಾನಸಿಕ ಹಿಂಸೆ ನೀಡಿ ಬೆದರಿಸಲಾಗುತ್ತಿತ್ತು.
ಸಂತ್ರಸ್ತ ಯುವಕರು ಸಂಸದರ ಗಮನಕ್ಕೆ ತಂದ ತಕ್ಷಣ ಕಾರ್ಯಪ್ರವೃತ್ತರಾದ ಕ್ಯಾ. ಬ್ರಿಜೇಶ್ ಚೌಟ ಅವರು ಭಾರತೀಯ ರಾಯಭಾರ ಕಚೇರಿ ಸಂಪರ್ಕಿಸಿ ನಿರಂತರ ಫಾಲೋ-ಅಪ್ ನಡೆಸಿದ್ದರು. ಪರಿಣಾಮವಾಗಿ, ಒತ್ತೆಯಾಳುಗಳಂತೆ ಇದ್ದ ದೇಶದ ವಿವಿಧ ರಾಜ್ಯಗಳ ಒಟ್ಟು 37 ಯುವಕರನ್ನು ರಕ್ಷಿಸಿ ತಾಯ್ನಾಡಿಗೆ ಮರಳಿದ್ದಾರೆ.