ಉಡುಪಿ, ಫೆ. 23 (DaijiworldNews/AA): ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ 20 ವರ್ಷದ ಯುವತಿಯೊಬ್ಬರು ಕಟಪಾಡಿಯಿಂದ ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಾಗಿದೆ.

ನಾಪತ್ತೆಯಾದ ವಿದ್ಯಾರ್ಥಿನಿಯನ್ನು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕು ಮೂಲದ ದೀಪಾ ಸುರೇಶ್ ಲಮಾಣಿ (20) ಎಂದು ಗುರುತಿಸಲಾಗಿದೆ.
ನಾಪತ್ತೆಯಾದ ಯುವತಿ ಉಡುಪಿ ನಗರದ ಕಾಲೇಜೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದು, ಕಟಪಾಡಿಯ ಆನೆಗುಡ್ಡೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.
ದೀಪಾ ಅವರು ಫೆಬ್ರವರಿ 20 ರಂದು ಕಾಲೇಜಿಗೆ ರಜೆ ಹಾಕಿ ಮನೆಯಿಂದ ಹೊರಹೋಗಿದ್ದರು. ಆದರೆ, ಅಂದಿನಿಂದ ಅವರು ಮನೆಗೆ ಮರಳಿಲ್ಲ. ಈ ಸಂಬಂಧ ನಾಪತ್ತೆ ದೂರು ದಾಖಲಾಗಿದ್ದು, ಪತ್ತೆಗಾಗಿ ಪೊಲೀಸರು ಜಾಲ ಬೀಸಿದ್ದಾರೆ.
ದೀಪಾ 5 ಅಡಿ 6 ಇಂಚು ಎತ್ತರ, ಗೋಧಿ ಬಣ್ಣ ಮತ್ತು ಸಾಧಾರಣ ಮೈಕಟ್ಟು ಹೊಂದಿದ್ದಾರೆ. ಆಕೆ ಕನ್ನಡ, ಲಂಬಾಣಿ ಮತ್ತು ಹಿಂದಿ ಭಾಷೆ ಮಾತನಾಡಬಲ್ಲರು.
ಈ ಯುವತಿಯ ಬಗ್ಗೆ ಯಾವುದೇ ಮಾಹಿತಿ ಲಭ್ಯವಿದ್ದಲ್ಲಿ ಸಾರ್ವಜನಿಕರು ಕೂಡಲೇ ಕಾಪು ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಕೋರಲಾಗಿದೆ.