ಕಾರ್ಕಳ, ಫೆ. 24 (DaijiworldNews/TA): ರಸ್ತೆಯಲ್ಲಿ ಅಡ್ಡಲಾಗಿ ನಿಲ್ಲಿಸಿದ್ದ ಕಾರನ್ನು ತೆಗೆಯುವಂತೆ ಕೇಳಿದ ವ್ಯಕ್ತಿಯ ಮೇಲೆ ಕಾರು ಹರಿಸಲು ಯತ್ನಿಸಿ, ಹಲ್ಲೆ ನಡೆಸಿದ ಘಟನೆ ಕಾರ್ಕಳ ತಾಲೂಕಿನ ಕಸಬಾ ಗ್ರಾಮದ ಕುಂಬ್ರಪದವು ಎಂಬಲ್ಲಿ ನಡೆದಿದೆ.

ಪಣಪಿಲ ನಿವಾಸಿ ನಿತಿನ್ (35) ಅವರು ರಿಕ್ಷಾದಲ್ಲಿ ಹೋಗುತ್ತಿದ್ದಾಗ, ಸೋಮನಾಥ ಎಂಬಾತ ತನ್ನ ಕಾರನ್ನು ರಸ್ತೆಗೆ ಅಡ್ಡವಾಗಿ ನಿಲ್ಲಿಸಿದ್ದ ಎನ್ನಲಾಗಿದೆ. ನಿತಿನ್ ಅವರು ಹಾರ್ನ್ ಹಾಕಿದರೂ ಕಾರು ತೆಗೆಯದಿದ್ದಾಗ, ಕೆಳಗಿಳಿದು ದಾರಿ ಬಿಡುವಂತೆ ವಿನಂತಿಸಿದ್ದಾರೆ. ಇದರಿಂದ ಕೆರಳಿದ ಆರೋಪಿಯು ಏಕಾಏಕಿ ಕಾರನ್ನು ನಿತಿನ್ ಮೈಮೇಲೆ ಹರಿಸಲು ಯತ್ನಿಸಿದ್ದಾನೆ.
ನಿತಿನ್ ತಪ್ಪಿಸಿಕೊಂಡು ರಿಕ್ಷಾದ ಬಳಿ ಬಂದಾಗ, ಆರೋಪಿಯು ಅಲ್ಲಿಗೂ ಬಂದು ಅವರ ಮೇಲೆ ಕೈಯಿಂದ ಹಲ್ಲೆ ಮಾಡಿದ್ದಾನೆ. ಜಗಳ ಬಿಡಿಸಲು ಬಂದ ಸ್ನೇಹಿತರಿಗೂ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿದ್ದಾನೆ. ಸಂಜೆ ವೇಳೆಗೆ ನಿತಿನ್ ಅವರ ಪರಿಚಯಸ್ಥರಿಗೂ ಕರೆ ಮಾಡಿ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.