ಮಂಗಳೂರು, ಫೆ. 26 (DaijiworldNews/TA): ವಿದ್ಯಾರ್ಥಿಗೆ ಹಲ್ಲೆಗೈದು ಅನೈತಿಕ ಪೊಲೀಸ್ ಗಿರಿ ನಡೆಸಿದ ಆರೋಪದಲ್ಲಿ ತಂದೆ ಮತ್ತು ಮಗನನನ್ನು ಪಾಂಡೇಶ್ವರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಸ್ಟೀವನ್ ಮೊಂತೇರೋ ಮತ್ತು ಆತನ ಪುತ್ರ ಅವಿಲ್ ಬಂಧಿತ ಆರೋಪಿಗಳು.

ದುಷ್ಕರ್ಮಿಗಳು ಸಹಪಾಠಿ ವಿದ್ಯಾರ್ಥಿನಿಯೊಬ್ಬಳೊಂದಿಗೆ ಮಾತುಕತೆಯಲ್ಲಿ ನಿರತನಾಗಿದ್ದ ವಿದ್ಯಾರ್ಥಿಯೋರ್ವನನ್ನು ದುಷ್ಕರ್ಮಿಗಳು ಜಾತಿನಿಂದನೆಗೈದು ಹಿಗ್ಗಾಮುಗ್ಗ ಥಳಿಸಿದ ಘಟನೆ ನಗರದ ಬಾಬುಗುಡ್ಡೆ ಸಮೀಪ ಗ್ರಾಮಸಂಘ ಎಂಬಲ್ಲಿ ನಡೆದಿತ್ತು. ಘಟನೆಯ ವೀಡಿಯೋ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ, ಈ ಕುರಿತು ಮಂಗಳೂರು ದಕ್ಷಿಣ ಠಾಣೆಯಲ್ಲಿ ಕೇಸು ದಾಖಲಾಗಿದ್ದು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದರು.
ಫೆಬ್ರವರಿ 23 ರಂದು ನಗರದ ಪ್ರತಿಷ್ಟಿತ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಿಬ್ಬರು ಬಾಬುಗುಡ್ಡೆಯ ರೈಲ್ವೇಟ್ರ್ಯಾಕ್ ಸಮೀಪದಿಂದ ಮಾತನಾಡುತ್ತಾ ಇದ್ದಾಗ ಆರೋಪಿಗಳು ಜಾತಿನಿಂದನೆಗೈದು ಹಲ್ಲೆಗೆ ಮುಂದಾದರು ಎಂದು ಆರೋಪಿಸಲಾಗಿದೆ.
’ಕಿಸ್ ಮಾಡಿದ ವೀಡಿಯೋ ನಮ್ಮಲ್ಲಿದೆ ಅದನ್ನ ಫೇಸ್ ಬುಕ್ ನಲ್ಲಿ ಹರಿಯಬಿಟ್ಟು ಮಾನ ತೆಗೆಯುತ್ತೇವೆ ’ ಎಂಬ ಮಾತುಗಳೊಂದಿದೆ ಸಹಪಾಠಿಗಳಾದ ಅಪ್ರಾಪ್ತ ವಿದ್ಯಾರ್ಥಿಗಳ ಹತ್ತಿರ ಧಾವಿಸಿದ ದುಷ್ಕರ್ಮಿಗಳು ಹಲ್ಲೆಯ ಜೊತೆ ಕ್ಷಮಾಪಣೆಗೂ ಒತ್ತಾಯಿಸಿದ್ದಾರೆ. ಓರ್ವ ಆರೋಪಿ ಹಲ್ಲೆ ಮಾಡುತ್ತಿರುವಾಗ ಇನ್ನೋರ್ವ ಆರೋಪಿ ಇದನ್ನು ತನ್ನ ಮೊಬೈಲಲ್ಲಿ ಸೆರೆಹಿಡಿದಿದ್ದಾನೆ ಎಂದು ಆರೋಪಿಸಲಾಗಿದೆ.