ವಿಟ್ಲ, ಫೆ. 26 (DaijiworldNews/TA): ಕೇರಳದಿಂದ ಕರ್ನಾಟಕಕ್ಕೆ ಅಕ್ರಮವಾಗಿ ಕೆಂಪುಕಲ್ಲುಗಳನ್ನು ಸಾಗಿಸುತ್ತಿದ್ದ 2 ಲಾರಿಗಳನ್ನು ವಿಟ್ಲ ಎಸ್.ಐ.ರಾಮಕೃಷ್ಣ ನೇತ್ರತ್ವದ ತಂಡ ವಶಕ್ಕೆ ಪಡೆದು ಪ್ರಕರಣ ದಾಖಲಿಸಿದೆ.

ಫೆ. 25ರಂದು ಮಧ್ಯಾಹ್ನ, ವಿಟ್ಲ ಪೊಲೀಸ್ ಠಾಣಾ ಪೊಲೀಸ್ ಉಪ ನಿರೀಕ್ಷಕ ರಾಮಕೃಷ್ಣರವರಿಗೆ ಕೇರಳ ಕಡೆಯಿಂದ ಪೆರುವಾಯಿ ಮಾರ್ಗವಾಗಿ ಲಾರಿಗಳಲ್ಲಿ ಕೆಂಪು ಕಲ್ಲುಗಳನ್ನು ಅಕ್ರಮವಾಗಿ ಕರ್ನಾಟಕ್ಕೆ ಸಾಗಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಸಿಬ್ಬಂದಿಗಳೊಂದಿಗೆ ಕಾರ್ಯಚರಣೆ ಮಾಡಿದಾಗ ಬಂಟ್ವಾಳ ತಾಲೂಕಿನ ಪೆರುವಾಯಿ ಗ್ರಾಮದ ಬೆರಿಪದವು ಎಂಬಲ್ಲಿ ಕೆಂಪುಕಲ್ಲುಗಳನ್ನು ತುಂಬಿಸಿಕೊಂಡು ಬರುತ್ತಿದ್ದ 02 ಲಾರಿಗಳನ್ನು ವಶಕ್ಕೆ ಪಡೆಯಲಾಗಿದೆ.
ಚಾಲಕರಾದ ವಿಟ್ಲ ನಿವಾಸಿಗಳಾದ ಸಾಧಿಕ್ (25) ಮೊಹಮ್ಮದ್ (46) ಎಂಬವರನ್ನು ವಶಕ್ಕೆ ಪಡೆಯಲಾಗಿದೆ. ಈ ವೇಳೆ ವಿಚಾರಣೆ ನಡೆಸಿದಾಗ ಕೆಂಪು ಕಲ್ಲುಗಳನ್ನು ಕೇರಳದ ಧರ್ಮತ್ತಡ್ಕದಿಂದ ವೇಣು ಎಂಬವರು ತುಂಬಿಸಿ ಕಳುಹಿಸಿಕೊಟ್ಟಿರುವುದಾಗಿ ಹಾಗೂ ಈ ಬಗ್ಗೆ ಯಾವುದೇ ಪರವಾನಿಗೆ ಅಥವಾ ದಾಖಲಾತಿಗಳು ಇರುವುದಿಲ್ಲ ಎಂದು ತಿಳಿಸಿದ್ದಾರೆ. ಮುಂದಿನ ಕಾನೂನುಕ್ರಮಕ್ಕಾಗಿ ಲಾರಿಗಳ ಚಾಲಕರನ್ನು ವಶಕ್ಕೆ ಪಡೆದು, ಲೋಡ್ ಸಹಿತವಾಗಿ ಲಾರಿಗಳನ್ನು ಸ್ವಾಧೀನಪಡಿಸಿ, ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.