ಮಂಗಳೂರು, ಫೆ. 26 (DaijiworldNews/TA): ನಗರದಲ್ಲಿ ಚೈನ್ ಲಿಂಕ್ ಹೆಸರಿನಲ್ಲಿ ವೆಕ್ಸಾನ್ ಎಂಬ ಕಂಪನಿ ಹಣ ಪಡೆದು ವಿದ್ಯಾರ್ಥಿಗಳನ್ನು ಮೋಸ ಮಾಡುತ್ತಿರುವ ಬಗ್ಗೆ ಆರೋಪ ಕೇಳಿಬಂದಿದೆ. ಮಹಾರಾಷ್ಟ್ರ ಮೂಲದ ವೆಕ್ಸಾನ್ (VEXON) ಹೆಸರಿನ ಕಂಪೆನಿಯೊಂದು ಮಂಗಳೂರಿನ ಕುದ್ರೋಳಿಯಲ್ಲಿ ಕಾರ್ಯಾಚರಿಸುತ್ತಿದ್ದು, ಕಳೆದ ಎರಡು ವರ್ಷಗಳಲ್ಲಿ ಮಾರ್ಕೆಟಿಂಗ್ ಉದ್ಯೋಗ ನೀಡುವುದಾಗಿ ಹೇಳಿ ನೂರಾರು ಮಂದಿಗೆ ಕೋಟ್ಯಂತರ ರೂ. ವಂಚಿಸಿದೆ.

ಇನ್ನು ಸದ್ಯ ಕಂಪೆನಿಯಿಂದ ಮೋಸಗೊಳಗಾಗಿರುವ ವಿದ್ಯಾರ್ಥಿಗಳು ಸದ್ಯ ಸುದ್ದಿಗೋಷ್ಠಿ ನಡೆಸಿ ಹೆಚ್ಚಿನ ಮಾಹಿತಿ ನೀಡಿದ್ದು, ತಮಗಾದ ನೋವನ್ನು ಹೇಳಿಕೊಂಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಸಂತ್ರಸ್ತ ವಿದ್ಯಾರ್ಥಿನಿ, ಜಾಲತಾಣದಲ್ಲಿ ಉದ್ಯೋಗ ಆಫರ್ ಜಾಹೀರಾತು ನೋಡಿ ಅಲ್ಲಿಗೆ ತೆರಳಿದ್ದೆ. ವೆಬ್ ಡಿಸೈನರ್, ವೆಬ್ ಡೆವಲಪರ್ ಉದ್ಯೋಗ ಇದೆಯೆಂದು ಹೇಳಿದ್ದರು. ಮೊದಲಿಗೆ ತರಬೇತಿ ಇದ್ದು, ಇದಕ್ಕಾಗಿ ಮೂರು ದಿನ ಇಲ್ಲಿಯೇ ನಿಲ್ಲಬೇಕು, ಊಟ ವಸತಿ ಕೊಡುತ್ತೇವೆ. ಅದಕ್ಕಾಗಿ 2500 ರೂ. ನೀಡಬೇಕಾಗುತ್ತದೆ. ತರಬೇತಿ ಮುಗಿದ ಮೇಲೆ ತಿಂಗಳಿಗೆ 32 ಸಾವಿರ ಸಂಬಳಕ್ಕೆ ಉದ್ಯೋಗ ನೀಡುತ್ತೇವೆ ಎಂದು ಹೇಳಿದ್ದರು.
ತರಬೇತಿ ವೇಳೆ ಬ್ರೇನ್ ವಾಷ್ ಮಾಡುತ್ತಾರೆ, ನಮ್ಮ ಮನೆಯ ಬಡತನ ಎಲ್ಲವನ್ನೂ ತಿಳಿದುಕೊಂಡು ಇಲ್ಲಿ ದುಡಿದರೆ ಕೆಲವೇ ತಿಂಗಳಲ್ಲಿ ಲಕ್ಷಾಂತರ ಸಂಪಾದನೆ ಮಾಡಬಹುದು ಎಂದು ಹೇಳಿ ಅರಮನೆ ತೋರಿಸುತ್ತಾರೆ ಎಂದು ಆರೋಪಿಸಿದ್ದಾರೆ.