ಮಂಗಳೂರು, ಫೆ. 27 (DaijiworldNews/AK):ಬಜಾಲ್ ಸ್ಟೇಟ್ ಬ್ಯಾಂಕ್ (ಚರ್ಚ್) ನಿಂದ ಮಂಗಳೂರು ನಗರ ಸ್ಟೇಟ್ ಬ್ಯಾಂಕ್ ನಡುವೆ ಸಂಚರಿಸುತ್ತಿದ್ದ ಸರಕಾರಿ ನರ್ಮ್ ಕೆ.ಎಸ್.ಆರ್.ಟಿ.ಸಿ ಬಸ್ಸನ್ನು ಕೂಡಲೇ ಪುನಃರಾರಂಭಿಸಲು, ಈ ಭಾಗದಿಂದ ಹೊರವಲಯ ಬಿಸಿರೋಡು, ಸುರತ್ಕಲ್, ಮುಡಿಪು ಭಾಗಗಳಿಗೂ ಸಂಪರ್ಕಿಸಲು ಹೆಚ್ಚುವರಿ ಸರಕಾರಿ ಬಸ್ಸು ಸೇವೆ ಪ್ರಾರಂಭಿಸಲು ಒತ್ತಾಯಿಸಿ ಡಿವೈಎಫ್ಐ ಬಜಾಲ್ ಘಟಕದ ನೇತೃತ್ವದಲ್ಲಿ ಇಂದು ಸಹಿ ಸಂಗ್ರಹ ಅಭಿಯಾನವನ್ನು ಪಕ್ಕಲಡ್ಕ ಬಸ್ ನಿಲ್ದಾಣದ ಬಳಿ ನಡೆಸಿದರು.



ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಡಿವೈಎಫ್ಐ ದ.ಕ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ , ಇತ್ತೀಚೆಗಿನ ದಿನಗಳಿಂದ ಬಜಾಲ್ ಭಾಗದ ನಾಗರೀಕರು ಸಾರ್ವಜನಿಕ ಸಾರಿಗೆ ಬಸ್ಸು ಸೇವೆಗಳಿಂದ ವಂಚನೆಗೊಳಗಾಗಿದ್ದಾರೆ.
ನಗರದ ಸ್ಟೇಟ್ ಬ್ಯಾಂಕ್ ಗೆ ಸಂಚರಿಸುತ್ತಿದ್ದ ನರ್ಮ್ ಬಸ್ಸೊಂದನ್ನು ಕೋರೋನಾ ಕಾಲದ ನಂತರ ನಿಲ್ಲಿಸಲಾಗಿ ಈ ವರೆಗೂ ಪ್ರಾರಂಭಿಸಿಲ್ಲ ಮಾತ್ರವಲ್ಲದೆ ಬಜಾಲ್ ಮತ್ತು ಜಲ್ಲಿಗುಡ್ಡೆ ಮಾರ್ಗವಾಗಿ ಸಂಚರಿಸುವ ಬಹುತೇಕ ಖಾಸಗೀ ಬಸ್ಸುಗಳು ಸಾರಿಗೆ ಪ್ರಾಧಿಕಾರ ನಿಗಧಿ ಪಡಿಸಿದ ಸಮಯಕ್ಕೆ ಸರಿಯಾಗಿ ಓಡದೆ ತಮಗೆ ಮನಬಂದಂತೆ ಟ್ರಿಪ್ ಕಡಿತ ಮಾಡುತ್ತಿದ್ದಾರೆ. ಬಜಾಲ್ ಭಾಗದ ಉದ್ದಕ್ಕೂ ಸರಕಾರಿ ಬಸ್ಸು ಸೇವೆ ಒದಗಿಸಬೇಕೆಂದು ಇಲ್ಲಿನ ಹಲವು ಸಂಘಸಂಸ್ಥೆಗಳು ಸಂಬಂಧಪಟ್ಟ ಇಲಾಖೆಗೆ, ಜನಪ್ರತಿನಿಧಿಗಳಿಗೆ ಮನವಿಯನ್ನು ಸಲ್ಲಿಸಿದ್ದರೂ ಈ ಬಗ್ಗೆ ಯಾವುದೇ ಕ್ರಮಕೈಗೊಳ್ಳದಿರೋದು ದುರಂತ.
ಸ್ಥಳೀಯ ಶಾಸಕರಿಗೆ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಯಾವೊಂದು ಇಚ್ಚಾಸಕ್ತಿಯು ಉಳಿದಿಲ್ಲ. ಕೇವಲ ಶೋಕಿ ಪ್ರಚಾರಗಳಿಗೆ, ಅನಗತ್ಯ ವಿಚಾರಗಳಲ್ಲಿ ಮೂಗು ತೂರಿಸುತ್ತಾರೆಯೇ ಹೊರತು ಒಬ್ಬ ಜನಪ್ರತಿನಿಧಿಯಾಗಿ ಕನಿಷ್ಟ ಕರ್ತವ್ಯವನ್ನು ನಿರ್ವಹಿಸುವ ಹೊಣೆಗಾರಿಕೆ ಇಲ್ಲದಿರೋದು ನಾಚಿಕೆಗೇಡಿನ ಸಂಗತಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ಅಭಿಯಾನದಲ್ಲಿ ಡಿವೈಎಫ್ಐ ಮಂಗಳೂರು ನಗರ ಮುಖಂಡರಾದ ಜಗದೀಶ್ ಬಜಾಲ್, ದೀಪಕ್ ಬಜಾಲ್, ಡಿವೈಎಫ್ಐ ಸ್ಥಳೀಯ ಮುಖಂಡರಾದ ಧೀರಾಜ್ ಬಜಾಲ್, ಪ್ರಶಾಂತ್ ಕುಡ್ತಡ್ಕ, ಪಕ್ಕಲಡ್ಕ ಯುವಕ ಮಂಡಲದ ಅಧ್ಯಕ್ಷರಾದ ದೀಕ್ಷಿತ್ ಭಂಡಾರಿ, ಕಾರ್ಯದರ್ಶಿ ಯಶ್ ರಾಜ್, ಜನತಾ ವ್ಯಾಯಮ ಶಾಲೆಯ ಕಾರ್ಯದರ್ಶಿ ಅಶೋಕ್ ಎನೆಲ್ಮಾರ್, ವರಪ್ರಸಾದ್, ಅಶೋಕ್ ಸಾಲ್ಯಾನ್ ಮುಂತಾದವರು ಉಪಸ್ಥಿತರಿದ್ದರು.