ಮಂಗಳೂರು, ಫೆ. 28 (DaijiworldNews/TA): ಇರಾನ್ ಮೇಲೆ ಇಸ್ರೇಲ್ ಮತ್ತು ಅಮೆರಿಕ ಜಂಟಿಯಾಗಿ ದಾಳಿ ನಡೆಸಿದ ಬಳಿಕ ಮುಂಜಾಗ್ರತಾ ಕ್ರಮವಾಗಿ ಗಲ್ಫ್ ರಾಷ್ಟ್ರಗಳು ತನ್ನ ವಾಯುಪ್ರದೇಶವನ್ನು ಮುಚ್ಚಿದೆ. ಈ ಹಿನ್ನೆಲೆಯಲ್ಲಿ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಗಲ್ಫ್ ಗೆ ತೆರಳುವ ಹಾಗೂ ಆಗಮಿಸುವ ವಿಮಾನಯಾನ ಸಂಚಾರಗಳು ರದ್ದಾಗಿವೆ.

ಮಧ್ಯಾಹ್ನ 1.20ಕ್ಕೆ ಮಂಗಳೂರಿನಿಂದ ದುಬೈಗೆ ಹೊರಡಬೇಕಿದ್ದ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನವನ್ನು ರದ್ದುಗೊಳಿಸಲಾಗಿದೆ. ಮಧ್ಯಾಹ್ನ 3 ಗಂಟೆಗೆ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನ ರದ್ದುಗೊಳಿಸಿರುವುದನ್ನು ತಿಳಿಸಿತು. ವಿಮಾನದಲ್ಲಿ ತೆರಳಲು 174 ಪ್ರಯಾಣಿಕರು ಮತ್ತು 6 ಮಂದಿ ಸಿಬ್ಬಂದಿ ಸಿದ್ಧರಾಗಿದ್ದರು ಎಂದು ಮಂಗಳೂರು ವಿಮಾನ ನಿಲ್ದಾಣದ ಪ್ರಕಟನೆ ತಿಳಿಸಿದೆ. ಇನ್ನು ಶನಿವಾರ ಬೆಳಿಗ್ಗೆ 11.17ಕ್ಕೆ ಮಂಗಳೂರಿನಿಂದ ದೋಹಾಕ್ಕೆ ಹೊರಟ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನವನ್ನು ಮುಂಬೈ ವಿಮಾನ ನಿಲ್ದಾಣಕ್ಕೆ ಮಾರ್ಗ ಬದಲಾಯಿಸಿ ಮುಂಬೈನಲ್ಲಿ ಇಳಿಸಲಾಗಿದೆ.
ಮಧ್ಯಾಹ್ನ 1.20ಕ್ಕೆ ಮಂಗಳೂರಿನಿಂದ ದುಬೈಗೆ ಹೊರಡಬೇಕಿದ್ದ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನ ರದ್ದುಗೊಂಡಿದೆ. ರಾತ್ರಿ 7.15ಕ್ಕೆ ಮಂಗಳೂರಿನಿಂದ ದುಬೈಗೆ ತೆರಳಬೇಕಿದ್ದ ಇಂಡಿಗೋ ವಿಮಾನವನ್ನು ರದ್ದುಗೊಳಿಸಲಾಗಿದೆ. ರಾತ್ರಿ 11.10ಕ್ಕೆ ಮಂಗಳೂರಿನಿಂದ ದಮಾಮ್ ಗೆ ತೆರಳಬೇಕಿದ್ದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ರದ್ದಾಗಿದೆ. ರಾತ್ರಿ 8.15ಕ್ಕೆ ಮಂಗಳೂರಿನಿಂದ ದುಬೈಗೆ ತೆರಳಬೇಕಿದ್ದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ರದ್ದಾಗಿದೆ. ರಾತ್ರಿ 10.05ಕ್ಕೆ ಮಂಗಳೂರಿನಿಂದ ಕುವೈತ್ ಗೆ ತೆರಳಬೇಕಿದ್ದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ರದ್ದು ಮಾಡಲಾಗಿದೆ. ರಾತ್ರಿ 11.20ಕ್ಕೆ ಮಂಗಳೂರಿನಿಂದ ಅಬುದಾಬಿಗೆ ತೆರಳಬೇಕಿದ್ದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ರದ್ದಾಗಿದೆ. ಮಧ್ಯಾಹ್ನ 2.15ಕ್ಕೆ ದೋಹಾದಿಂದ ಹೊರಟು ಮಂಗಳೂರಿಗೆ ರಾತ್ರಿ 8.45ಕ್ಕೆ ಬರಬೇಕಿದ್ದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ರದ್ದಾಗಿದೆ.
ಸಂಜೆ 5 ಗಂಟೆಗೆ ದುಬೈನಿಂದ ಹೊರಟು ಮಂಗಳೂರಿಗೆ ರಾತ್ರಿ 10.10ಕ್ಕೆ ತಲುಪಬೇಕಿದ್ದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ರದ್ದಾಗಿದೆ. ಸದ್ಯ ಯುದ್ದದ ಅನಿಶ್ಚಿತತೆ ಹಿನ್ನೆಲೆಯಲ್ಲಿ ಮುಂದಿನ ಕೆಲವು ದಿನಗಳ ಕಾಲ ಮಂಗಳೂರಿನಿಂದ ಗಲ್ಫ್ ರಾಷ್ಟ್ರಗಳಿಗೆ ತೆರಳುವ ಹಲವು ವಿಮಾನಗಳು ರದ್ದಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಹಾಗಾಗಿ ಕೊಲ್ಲಿ ರಾಷ್ಟ್ರಗಳಿಗೆ ತೆರಳುವ ಪ್ರಯಾಣಿಕರು ಸರ್ಕಾರ ಹಾಗೂ ವಿಮಾನ ನಿಲ್ದಾಣ ಹೊರಡಿಸುವ ಮಾರ್ಗಸೂಚಿಗಳನ್ನು ಗಮನಿಸಬೇಕಿದೆ.