ಮಂಗಳೂರು,ಮಾ. 01 (DaijiworldNews/TA): ಅಂಗನವಾಡಿಗಳಲ್ಲಿ ಅತ್ಯಂತ ಕಳಪೆ ಆಹಾರಗಳನ್ನು ಪೂರೈಸಲಾಗುತ್ತಿದೆ. ಮಕ್ಕಳು ಉಂಡೆ ಪುಡಿಯನ್ನು ತಿನ್ನುತ್ತಿಲ್ಲ. ಎಲ್ಲವನ್ನು ದನಗಳಿಗೆ ಹಾಕಲಾಗುತ್ತಿದೆ. ಹಾಗಾಗಿ ಮಕ್ಕಳಿಗೆ ನೀಡಲು ಈ ಆಹಾರವನ್ನು ನೀಡಲು ನಮಗೂ ಕಷ್ಟವಾಗುತ್ತಿದೆ ಎಂದು ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಸಂಘದ ಕೋಶಾಧಿಕಾರಿ ವಿಶಾಲಾಕ್ಷಿ ತಿಳಿಸಿದರು.

ಮಂಗಳೂರಿನಲ್ಲಿ ನಡೆದ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಸಂಘ (ರಿ) ಮಂಗಳೂರು ಇದರ ವಾರ್ಷಿಕೋತ್ಸವ ಸಮಾರಂಭ ಅವರು ಮಾತನಾಡುತ್ತಿದ್ದರು. ಮಕ್ಕಳು ತಿನ್ನುವ ಆಹಾರ ದನಗಳಿಗೆ ಹಾಕಲಾಗುತ್ತಿದೆ. ಮಕ್ಕಳ ಆಹಾರ ಮಕ್ಕಳಿಗೆ ಸಿಗುವಂತಾಗಲಿ. ಮಕ್ಕಳಿಗಾಗಿ ಸರಕಾರ ಸಾವಿರಾರು ಕೋಟಿ ರೂ. ಹಣ ಖರ್ಚು ಮಾಡುತ್ತಿದೆ. ಕಳೆದ ಮೂರು ತಿಂಗಳಿನಿಂದ ಮಕ್ಕಳಿಗೆ ನೀಡಲಾಗುವ ಪುಷ್ಠಿ ಕಳಪೆ ಗುಣಮಟ್ಟವನ್ನು ಹೊಂದಿದ್ದು, ತಿನ್ನಲು ಕೂಡ ಆಗುತ್ತಿಲ್ಲ. ಕೇವಲ ಎಣ್ಣೆ, ಬೇಳೆಯಲ್ಲಿ ಸಾಂಬಾರು ಮಾಡಲು ಆಗಲ್ಲ. ಅದಕ್ಕೆ ತರಕಾರಿ, ಹುಣಸೆ ಹಣ್ಣು, ಇನ್ನಿತರ ವಸ್ತುಗಳು ಬೇಕಾಗುತ್ತದೆ. ಆದರೆ ಅದನ್ನು ಸರ್ಕಾರ ನೀಡುತ್ತಿಲ್ಲ. ಅದನ್ನು ಪೂರೈಸುವ ವ್ಯವಸ್ಥೆ ಆಗಲಿ ಎಂದು ಅವರು ಆಗ್ರಹಿಸಿದರು.