ಯುಪಿಎಸ್ಸಿಯಲ್ಲಿ 169 ನೇ ಸ್ಥಾನ ಪಡೆದ ಉಡುಪಿಯ ಶ್ರೇಯನ್ಸ್ ಗೋಮ್ಸ್
Sat, Mar 07 2026 11:16:51 AM
ಉಡುಪಿ, ಮಾ. 07 (DaijiworldNews/ AK): ಉಡುಪಿಯ ಶ್ರೇಯನ್ಸ್ ಗೋಮ್ಸ್ ಅವರು 2025 ರ ಕೇಂದ್ರ ಲೋಕಸೇವಾ ಆಯೋಗದ (ಯುಪಿಎಸ್ಸಿ) ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ 169 ನೇ ರ್ಯಾಂಕ್ ಗಳಿಸಿದ್ದಾರೆ. ಕರ್ನಾಟಕ ರಾಜ್ಯದಿಂದ ವಿವಿಧ ಹುದ್ದೆಗಳಿಗೆ ಆಯ್ಕೆಯಾದ 25 ಅಭ್ಯರ್ಥಿಗಳಲ್ಲಿ ಅವರು ಒಬ್ಬರು. ಅವರ ಸ್ಪೂರ್ತಿದಾಯ ಸ್ಟೋರಿ ತಿಳಿಯೋಣ.
ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರದಲ್ಲಿ ಸಂತ್ಯಾಗ್ ಜುಜೆ ಗೋಮ್ಸ್ ಮತ್ತು ಮಾಬಲ್ ಶಾಂತಿ ಗೋಮ್ಸ್ ದಂಪತಿಗೆ ಜನಿಸಿದ ಶ್ರೇಯನ್ಸ್, ತಮ್ಮ ಪೂರ್ವ-ವಿಶ್ವವಿದ್ಯಾಲಯ ಶಿಕ್ಷಣಕ್ಕಾಗಿ ಮೂಡುಬಿದಿರೆಯ ಆಳ್ವಾಸ್ ಕಾಲೇಜಿಗೆ ತೆರಳುವ ಮೊದಲು ತಮ್ಮ ಹುಟ್ಟೂರಿನಲ್ಲಿ ತಮ್ಮ ಆರಂಭಿಕ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದರು. ನಂತರ ಅವರು ಬೆಂಗಳೂರಿನ ಪ್ರತಿಷ್ಠಿತ ಆರ್ವಿ ಕಾಲೇಜ್ ಆಫ್ ಎಂಜಿನಿಯರಿಂಗ್ನಲ್ಲಿ ಎಂಜಿನಿಯರಿಂಗ್ ಪದವಿ ಪಡೆದರು.
ಅವರ ತಂದೆ ಕೊಂಕಣ ರೈಲ್ವೇಯಲ್ಲಿ ಸ್ಟೇಷನ್ ಮಾಸ್ಟರ್ ಆಗಿದ್ದರೆ, ತಾಯಿ ಗೃಹಿಣಿ. ಅವರ ಕಿರಿಯ ಸಹೋದರ ಶ್ರೇಯಿತ್ ಗೋಮ್ಸ್ ಪ್ರಸ್ತುತ ಮಣಿಪಾಲದಲ್ಲಿ ಓದುತ್ತಿದ್ದಾರೆ.
ಶ್ರೇಯನ್ಸ್ ಎಂಜಿನಿಯರಿಂಗ್ ದಿನಗಳಲ್ಲಿ ನಾಗರಿಕ ಸೇವೆಗಳಲ್ಲಿ ಆಳವಾದ ಆಸಕ್ತಿಯನ್ನು ಬೆಳೆಸಿಕೊಂಡರು. ರಾಷ್ಟ್ರಕ್ಕೆ ಸೇವೆ ಸಲ್ಲಿಸುವ ಬಯಕೆಯಿಂದ ಮತ್ತು ಆಡಳಿತದ ಶಕ್ತಿಯಿಂದ ಪ್ರೇರಿತರಾಗಿ, ಅವರು ಯುಪಿಎಸ್ಸಿ ಪರೀಕ್ಷೆಗಳಿಗೆ ಹಾಜರಾಗಲು ನಿರ್ಧರಿಸಿದರು.
ಮೊದಲ ಪ್ರಯತ್ನದಲ್ಲೇ ಶ್ರೇಯನ್ಸ್ ಪ್ರಾಥಮಿಕ ಪರೀಕ್ಷೆಯಲ್ಲಿ ಯಶಸ್ವಿಯಾಗಿ ಉತ್ತೀರ್ಣರಾದರು ಆದರೆ ಮುಖ್ಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಸಾಧ್ಯವಾಗಲಿಲ್ಲ. ಅವರ ಎರಡನೇ ಪ್ರಯತ್ನ ಪ್ರಾಥಮಿಕ ಹಂತದಲ್ಲಿಯೇ ವಿಫಲರಾದರು. ಆದರೆ ಈ ಹಿನ್ನಡೆಗಳಿಂದ ಎದೆಗುಂದದೆ, ಅವರು ವಿಭಿನ್ನ ಕಾರ್ಯತಂತ್ರದೊಂದಿಗೆ ಪರೀಕ್ಷೆಯ ತಯಾರಿಯನ್ನು ಮುಂದುವರಿಸಿದರು.
ತಮ್ಮ ಮೂರನೇ ಪ್ರಯತ್ನದಲ್ಲಿ ಶ್ರೇಯನ್ಸ್ ಗೋಮ್ಸ್ 2024–25ರಲ್ಲಿ 372 ನೇ ರ್ಯಾಂಕ್ ಗಳಿಸಿದ್ದರು. ಆದರೆ ಇನ್ನು ಉತ್ತಮ ರ್ಯಾಂಕ್ನ್ನು ಪಡೆಯಲು ಅವರು ನಾಲ್ಕನೇ ಪ್ರಯತ್ನ ಮಾಡಿದರು. ಈಗ ಯಶಸ್ವಿಯಾಗಿ 169 ನೇ ಶ್ರೇಯಾಂಕವನ್ನು ಪಡೆದುಕೊಂಡಿದ್ದಾರೆ. ಅಂತಿಮ ಫಲಿತಾಂಶಗಳನ್ನು ಶುಕ್ರವಾರ, ಮಾರ್ಚ್ 6, 2026 ರಂದು ಪ್ರಕಟಿಸಲಾಯಿತು.