ಉಡುಪಿ, ಮಾ. 08 (DaijiworldNews/TA): ಕಾಂಗ್ರೆಸ್ ಮುಖಂಡ ಕಾಪು ದಿವಾಕರ ಶೆಟ್ಟಿ ಅವರ ಮನೆಯಲ್ಲಿ ಜನವರಿ 30ರಂದು ನಡೆದ ಕಳವು ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಅಂತರ್ ರಾಜ್ಯ ಕಳವು ಆರೋಪಿಗಳನ್ನು ಕಾಪು ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡು ರಾಜ್ಯದ ತಿರುನಲ್ವೇಲಿ ತಿರುಕ್ಕುರುಂಕುಡಿಯ ಎಸಾಕ್ಕಿ ರಾಜ (28) ಹಾಗೂ ಆತನ ಸಹಚರ ನಂಬಿ ರಾಜ (23) ಬಂಧಿತರು.

ಕಾಪು ದಿವಾಕರ ಶೆಟ್ಟಿ ಕುಟುಂಬದವರು ಉಳಿಯಾರಗೋಳಿ ಗ್ರಾಮದ ಕೋತಲಕಟ್ಟೆಯಲ್ಲಿರುವ ಮನೆಗೆ ಬೀಗ ಹಾಕಿ ಮುಂಬಯಿಗೆ ಹೋಗಿದ್ದು, ಈ ಸಂದರ್ಭದಲ್ಲಿ ಮನೆಯ ಮುಖ್ಯ ಬಾಗಿಲ ಬೀಗವನ್ನು ಒಡೆದು ನುಗ್ಗಿದ ಕಳ್ಳರು, ದೇವರ ಕೋಣೆಯಲ್ಲಿದ್ದ ಮತ್ತು ಬೆಡ್ರೂಂನ ಕಪಾಟಿನಲ್ಲಿದ್ದ ಬೆಳ್ಳಿ ಹಾಗೂ 30 ಗ್ರಾಂ ತೂಕದ ಕರಗಿಸಿದ ಗಟ್ಟಿ ಚಿನ್ನ, ವಾಚ್ ಹಾಗೂ ನಗದು ಸೇರಿ ಒಟ್ಟು 19,05,000ರೂ. ಮೌಲ್ಯದ ಸೊತ್ತುಗಳನ್ನು ಕಳವು ಮಾಡಿರುವ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು, ಕುಖ್ಯಾತ ಅಂತರ್ ರಾಜ್ಯ ಕಳ್ಳವು ಆರೋಪಿ ಎಸಾಕ್ಕಿ ರಾಜಾ ಮತ್ತು ಆತನ ಸಹಚರ ನಂಬಿ ರಾಜ ಎಂಬಾತನನ್ನು ಬಂಧಿಸಿದರು. ಈ ಪ್ರಕರಣದಲ್ಲಿ ತಮಿಳುನಾಡು ರಾಜ್ಯದ ಉಳಿದ ಪ್ರಮುಖ ಮೂರು ಆರೋಪಿಗಳು ಭಾಗಿಯಾಗಿದ್ದು, ಇವರನ್ನು ಪತ್ತೆ ಹಚ್ಚಿ, ಸೊತ್ತು ವಶಪಡಿಸಿಕೊಳ್ಳಲು ಬಾಕಿ ಇದೆ. ಈ ಆರೋಪಿಗಳ ವಿರುದ್ಧ ಕೇರಳ ಮತ್ತು ತಮಿಳುನಾಡು ರಾಜ್ಯಗಳ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾ ಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಉಡುಪಿ ಎಸ್ಪಿ ಹರಿರಾಂ ಶಂಕರ್ ಮಾರ್ಗದರ್ಶನದಲ್ಲಿ ಬಂಧನ ಕಾರ್ಯಾಚರಣೆ ನಡೆದಿದೆ.