ಬೆಳ್ತಂಗಡಿ, ಮಾ. 11 (DaijiworldNews/AK): ಬೆಳ್ತಂಗಡಿ ತಾಲೂಕಿನ ಮುಂಡಾಜೆ ಗ್ರಾಮದ ರಾಷ್ಟ್ರೀಯ ಹೆದ್ದಾರಿಯ ಕಾಪುವಿನಲ್ಲಿ ಮಂಗಳವಾರ ಕಾರು ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾದ ಪರಿಣಾಮ ಇಬ್ಬರು ಸಣ್ಣಪುಟ್ಟ ಗಾಯಗಳಾಗಿರುವ ಘಟನೆ ನಡೆದಿದೆ.

ಗಾಯಾಳುಗಳನ್ನು ತಿಪಟೂರಿನ ಶ್ರೀನಿವಾಸ (53) ಮತ್ತು ಷಣ್ಮುಖ (46) ಎಂದು ಗುರುತಿಸಲಾಗಿದ್ದು, ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದು, ಕಕ್ಕಿಂಜೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ವರದಿಗಳ ಪ್ರಕಾರ, ಕಾರು ತಿಪಟೂರಿನಿಂದ ಉಜಿರೆ ಕಡೆಗೆ ಪ್ರಯಾಣಿಸುತ್ತಿತ್ತು. ಮಂಗಳವಾರ ಬೆಳಗಿನ ಜಾವ 4 ಗಂಟೆ ಸುಮಾರಿಗೆ ಮುಂಡಾಜೆ ಗ್ರಾಮದ ಕಾಪು ತಲುಪಿದಾಗ, ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆಯಿಂದ ಹೊರಕ್ಕೆ ಉರುಳಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ನಂತರ ಮಗುಚಿ ಬಿದ್ದಿದೆ.
ಪರಿಣಾಮ ವಿದ್ಯುತ್ ಕಂಬ ಮುರಿದು ಬಿದ್ದ ಪರಿಣಾಮ, ಕಕ್ಕಿಂಜೆ ವಿದ್ಯುತ್ ಉಪಕೇಂದ್ರಕ್ಕೆ ಸಂಪರ್ಕ ಹೊಂದಿರುವ ಮುಂಡಾಜೆ ಮತ್ತು ದಿಡುಪೆ ಫೀಡರ್ ಪ್ರದೇಶಗಳಲ್ಲಿ ಮಧ್ಯಾಹ್ನದವರೆಗೆ ವಿದ್ಯುತ್ ವ್ಯತ್ಯಯ ಉಂಟಾಯಿತು. ಅಪಘಾತದಲ್ಲಿ ಕಾರು ತೀವ್ರವಾಗಿ ಹಾನಿಗೊಳಗಾಗಿದ್ದು, ವಾಹನದ ಒಂದು ಭಾಗಕ್ಕೆ ತೀವ್ರ ಹಾನಿಯಾಗಿದೆ.