ಸುರತ್ಕಲ್, ಮಾ. 16 (DaijiworldNews/AK): ಇಲ್ಲಿನ ಇನಾಯತ್ ಅಲಿ ಅಭಿಮಾನಿ ಬಳಗದ ವತಿಯಿಂದ ಬೃಹತ್ ಸೌಹಾರ್ದ ಇಫ್ತಾರ್ ಕೂಟವು ರವಿವಾರ ಕೃಷ್ಣಾಪುರದ ಕೇಂದ್ರ ಮೈದಾನದಲ್ಲಿ ಜರುಗಿತು. ಕೃಷ್ಣಾಪುರ ಸಂಯುಕ್ತ ಖಾಝಿ ಇಬ್ರಾಹೀಂ ಮುಸ್ಲಿಯಾರ್ ಅವರು ಸೌಹಾರ್ದ ಇಫ್ತಾರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅಬ್ದುಲ್ ಅಝೀಝ್ ದಾರಿಮಿ ದುಆ ನೆರವೇರಿಸಿದರು.



ಕೃಷ್ಣಾಪುರ ಜುಮಾ ಮಸೀದಿಯ ಖತೀಬ್ ಫಾರೂಕ್ ಸಖಾಫಿ ಕೃಷ್ಣಾಪುರ ಅವರು ಭಾವಕ್ಯತಾ ಸಂದೇಶ ನೀಡಿ, ಭಾರತೀಯರಾಗಿರುವ ನಾವೆಲ್ಲರೂ ಸಹೋದರೇ. ನಮ್ಮ ನಮ್ಮ ಜಾತಿ ಧರ್ಮಗಳನ್ನು ಅನುಸರಿಸಿಕೊಂಡು ಉಳಿದ ಜಾತಿ ಧರ್ಮಗಳನ್ನು ಗೌರವಿಸಬೇಕಿದೆ. ಎಲ್ಲರೂ ಪರಸ್ಪರ ಪ್ರೀತಿ, ವಿಶ್ವಾಸದೊಂದಿಗೆ ಬಾಳಿದರೆ ಮಾತ್ರ ದೇಶ ಉನ್ನತಮಟ್ಟಕ್ಕೆ ಏರಲು ಸಾಧ್ಯ ಎಂದರು.
ಮಾಣಿಲ ಮೋಹನ್ ದಾಸ್ ಪರಮಹಂಸ ಸ್ವಾಮೀಜಿ ಅವರು ಮಾತನಾಡಿ, ಮಾವೀಯತೆಗೆ ಯಾವುದೇ ಜಾತಿ, ಮತ, ಧರ್ಮಗಳ ಬೇಧವಿಲ್ಲ. ಜಗತ್ತಿನ ಮೂಲೆ ಮೂಲೆಗಳಲ್ಲಿ ಬದುಕಿರುವ ಪ್ರಾಣಿ ಮನುಷ್ಯರ ರಕ್ತ ಒಂದೇ. ಈ ಇಫ್ತಾರ್ ಪ್ರೀತಿ ಮತ್ತು ಭಾವೈಕ್ಯತೆಯ ಸಂದೇಶ ನೀಡುತ್ತದೆ. ಮಾನವೀಯ ಮೌಲ್ಯಗಳೊಂದಿಗೆ ಸಮಾಜವನ್ನು ಕಟ್ಟಿ ಬೆಳೆಸುವುದು ಎಲ್ಲರ ಪ್ರಥಮ ಕರ್ತವ್ಯ ಎಂದರು.
ಮುಕ್ಕ ಹೋಲಿ ಸ್ಪಿರಿಟ್ ಚರ್ಚ್ ನ ವಂ. ಫಾ. ಸ್ಟಾನಿ ಪಿಂಟೊ ಅವರು ಮಾತನಾಡಿ, ಸೌಹಾರ್ದ ಕೇವಲ ವೇದಿಕೆಗಳಿಗೆ ಮಾತ್ರ ಸೀಮಿತವಾಗದೆ ಜೀವನದ ಉದ್ದಕ್ಕೂ ಇರಬೇಕು. ಪ್ರಥಮವಾಗಿ ನಮ್ಮ ನೆರೆ-ಹೊರೆಯರೊಂದಿಗೆ ಪ್ರೀತಿ, ಗೌರವ, ಸೌಹಾರ್ದದಿಂದ ಇರಬೇಕು. ಹಾಗಾಗದರೆ ಎಲ್ಲೆಡೆಯೂ ಸೌಹಾರ್ದ ವಾತಾವರಣ ಸೃಷ್ಟಿಯಾಗಲಿದೆ ಎಂದರು.
ಬಳಿಕ ಮಾತನಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಅವರು, ನನ್ನ ಅಭಿಮಾನಿಗಳ ತಂಡವವೊಂದನ್ನು ಕಟ್ಟಿಕೊಂಡು ಎಲ್ಲಾ ಜಾತಿ, ಧರ್ಮಗಳನ್ನು ಸೇರಿಸಿಕೊಂಡು ಸಾವಿರಾರು ಜನರನ್ನು ಸೇರಿಸಿ ಸೌಹಾರ್ದ ಇಫ್ತಾರ್ ಕಾರ್ಯಕ್ರಮ ಆಯೋಜಿಸಿರುವುದು ಬಹಳ ಸಂತೋಷ ತಂದಿದೆ. ಸುರತ್ಕಲ್ ಭಾಗದ ಜನರ ಪ್ರೀತಿಗೆ ನಾನು ಎಂದೆಂದಿಗೂ ಚಿರೃಣಿ. ಇಂದು 7ಸಾವಿರ ಮಂದಿಗೆ ಸೌಹಾರ್ದ ಇಫ್ತಾರ್ ಆಯೋಜಿಸಿರುವ ತಂಡಕ್ಕೆ ಕೃತಜ್ಞತೆಗಳು ಎಂದು ಇನಾಯತ್ ಅಲಿ ನುಡಿದರು.
ಇದೇ ವೇಳೆ ಸರ್ವಧರ್ಮೀಯ 400 ಮಂದಿ ಅಶಕ್ತರಿಗೆ ಐಆ್ಯಮ್ ಫೌಂಡೇಶನ್ ನಿಂದ ಸಹಾಯಹಸ್ತ ನೀಡಲಾಯಿತು. ಬೃಹತ್ ಸೌಹಾರ್ದ ಇಫ್ತಾರ್ ಕಾರ್ಯಕ್ರಮದಲ್ಲಿ ವಿವಿಧ ಸಮುದಾಯಗಳ ಸುಮಾರು 7000 ಮಂದಿ ಭಾಗವಹಿಸಿದರು.
ಈ ಸಂದರ್ಭ ಮಾಜಿ ಸಚಿವ ರಮಾನಾಥ ರೈ, ಯುವ ಕಾಂಗ್ರೆಸ್ ಉಸ್ತುವಾರಿ ಗಿರೀಶ್ ಆಳ್ವ, ಪದ್ಮರಾಜ್ ಆರ್. ಪೂಜಾರಿ, ಟಿ.ಎಂ. ಸೈಯ್ಯದ್ ತೆಕ್ಕಿಲ್, ಅಲ್ಪಸಂಖ್ಯಾತ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಶಮೀರ್ ಕಾಟಿಪಳ್ಳ, ಎಂ.ಜಿ. ಹೆಗ್ಡೆ, ನಾಸೀರ್ ಲಕ್ಕಿಸ್ಟಾರ್, ಬಿ.ಎಲ್. ಪದ್ಮನಾಭ, ರೂಪೇಶ್ ರೈ, ಮಾಜಿ ಕಾರ್ಪೊರೇಟರ್ ಬಶೀರ್ ಕಾಟಿಪಳ್ಳ, ಮಂಗಳೂರು ನಗರ ಪಾಲಿಕೆ ಮಾಜಿ ಸದಸ್ಯರು, ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.
ರೆಹಮಾನ್ ಖಾನ್ ಕುಂಜತ್ತಬೈಲ್ ಸ್ವಾಗತಿಸಿದರು. ನೌಫಲ್ ಕಳಸ ನಿರೂಪಿಸಿದರು. ಇನಾಯತ್ ಅಲಿ ಅಭಿಮಾನಿ ಬಳಗದ ಶಾಫಿ ಧನ್ಯವಾದ ಸಮರ್ಪಿಸಿದರು.