ಮಂಗಳೂರು, ಮಾ. 17 (DaijiworldNews/TA) : ‘ಮೂಡುಬಿದಿರೆ ಪೊಲೀಸ್ ಇನ್ ಸ್ಪೆಕ್ಟರ್ ಸಂದೇಶ್ ಬಿ.ಜಿ. ವಿರುದ್ಧ ನನ್ನ ಸಹೋದರಿ ಸುಮತಿ ನಾಯ್ಕ್ ಮಾಡಿದ ಆರೋಪಗಳೆಲ್ಲ ಸುಳ್ಳು’ ಎಂದು ಮೂಡುಬಿದಿರೆ ನಿವಾಸಿ ಪ್ರಫುಲ್ಲಾ ನಾಯ್ಕ್ ಎಂಬವರು ಹೇಳಿದ್ದಾರೆ.

ಮಂಗಳೂರು ಪ್ರೆಸ್ ಕ್ಲಬ್ ನಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸುಮತಿ ನಾಯ್ಕ್ ವಿರುದ್ಧ ಮಂಗಳೂರು, ಮೂಡುಬಿದಿರೆ, ವೇಣೂರು, ಬೆಂಗಳೂರಿನ ಮಡಿವಾಳ ಸೇರಿದಂತೆ ಹಲವು ಕಡೆಗಳಲ್ಲಿ ಪ್ರಕರಣ ದಾಖಲಾಗಿವೆ. ಹಲ್ಲೆ ನಡೆಸಿ, ಹಣ ವಸೂಲಿ ಮಾಡಿದ ಆರೋಪವೂ ಆಕೆಯ ಮೇಲಿದೆ’ ಎಂದು ಆರೋಪಿಸಿದರು.
‘ಕಳೆದ ವರ್ಷ ನಮ್ಮ ಕುಟುಂಬಕ್ಕೆ ಸಂಬಂಧಿಸಿದ ಕೌಟುಂಬಿಕ ಕಲಹವೊಂದು ಮೂಡುಬಿದಿರೆ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ನನ್ನ ಹಾಗೂ ನನ್ನ ಪತಿ ಮಧ್ಯೆ ಕೌಟುಂಬಿಕ ಕಲಹದಲ್ಲಿ ಸುಮತಿ ನಾಯ್ಕ್ ಮಧ್ಯಪ್ರವೇಶಿಸಿದ್ದರ ಬಗ್ಗೆ ಮೂಡುಬಿದಿರೆ ಇನ್ ಸ್ಪೆಕ್ಟರ್ ಸಂದೇಶ್ ಆಕೆಯನ್ನು ತರಾಟೆಗೈದಿದ್ದರು. ಆ ವೇಳೆ ತನ್ನ ಮಗನ ಮೇಲೆ ಹೊಡೆದರೆಂಬ ಕಾರಣಕ್ಕೆ ಸುಮತಿ ನಾಯ್ಕ್ ಮೂಡುಬಿದರೆ ಇನ್ ಸ್ಪೆಕ್ಟರ್ ಮೇಲೆ ದ್ವೇಷದಿಂದ ಸುಳ್ಳು ಆರೋಪ ಮಾಡುತ್ತಿದ್ದಾರೆ’ ಎಂದು ದೂರಿದರು.
ಮೂಡಬಿದ್ರೆ ಇನ್ಸ್ ಪೆಕ್ಟರ್ ಒಳ್ಳೆಯವರು. ನಮ್ಮ ಕುಟುಂಬದ ನಡುವೆ ಇರುವ ಒಡಕಿನ ಕುರಿತು ಅವರು ನ್ಯಾಯ ಕೊಡಿಸಲು ಮುಂದಾಗಿದ್ದಕ್ಕೆ ನನ್ನ ತಂಗಿ ಈ ರೀತಿಯ ಷಡ್ಯಂತ್ರವನ್ನು ಮಾಡಿದ್ದಾಳೆ ಎಂದು ಆರೋಪಿಸಿದರು. ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ವರ್ತೂರು ಮಂಜುನಾಥ್, ಹರೀಶ್ ಮೂಡುಬಿದಿರೆ ಉಪಸ್ಥಿತರಿದ್ದರು.