ಮಂಗಳೂರು, ಮಾ. 17 (DaijiworldNews/TA) : ಕೊಂಕಣಿ ಸಾಹಿತಿ ಎಚ್.ಎಂ. ಪೆರ್ನಾಲ್ (ಹೆನ್ರಿ ಮೆಂಡೋನ್ಸಾ) ಅವರಿಗೆ 2025ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ಅವರು 2021ರಲ್ಲಿ ಪ್ರಕಟಿಸಿದ ಸಾಹಿತ್ಯ ವಿಮರ್ಶೆ ಕೃತಿಯಾದ 'ಕೊಂಕಣಿ ಕಾವೈಂ: ರುಪಾಂ ಆನಿ ರೂಪಕಾಂ'ಗೆ ಪ್ರಶಸ್ತಿ ಲಭಿಸಿದೆ. ಆ ಮೂಲಕ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಭಾಜನರಾದ ಕರ್ನಾಟಕದ ನಾಲ್ಕನೇ ಕೊಂಕಣಿ ಸಾಹಿತಿ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.

ಅವರ 'ಕೊಂಕಣಿ ಕಾವ್ಯಂ: 'ರುಪಾಂ ಆನಿ ರೂಪಕಾಂ' ಕೃತಿಯು ಸಾಹಿತ್ಯ ವಿಮರ್ಶೆ ವಿಭಾಗದಲ್ಲಿ ಪ್ರಶಸ್ತಿ ಪಡೆದ ಮೊದಲ ಕೊಂಕಣಿ ಕೃತಿ ಎಂಬ ಹೆಗ್ಗಳಿಕೆ ಪಡೆದಿದೆ. ಈ ಕೃತಿಗೆ 2021ರಲ್ಲಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯಿಂದ ಉತ್ತಮ ಪುಸ್ತಕ ಪ್ರಶಸ್ತಿ ಮತ್ತು 2023ರಲ್ಲಿ ಗೋವಾ ಕೊಂಕಣಿ ಅಕಾಡೆಮಿಯಿಂದ ಉತ್ತಮ ಪುಸ್ತಕ ಪ್ರಶಸ್ತಿ ಲಭಿಸಿತ್ತು. 850ಕ್ಕೂ ಹೆಚ್ಚು ಕವಿತೆಗಳು, 100ಕ್ಕೂ ಹೆಚ್ಚು ಕಥೆಗಳು ಮತ್ತು 2,000ಕ್ಕೂ ಹೆಚ್ಚು ಲೇಖನಗಳನ್ನು ಬರೆದಿರುವ ಅವರು ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳ ಮೂಲಕ ಕೊಂಕಣಿ ಸಾಹಿತ್ಯವನ್ನು ಪೋಷಿಸುತ್ತಾ ಬಂದಿದ್ದಾರೆ.
ಅವರು ವೃತ್ತಿಯಲ್ಲಿ ಕಮರ್ಶಿಯಲ್ ಅಕೌಂಟೆಂಟ್. ಕನ್ನಡದಲ್ಲಿ ಬರವಣಿಗೆ ಆರಂಭಿಸಿದ ಅವರು ಬಳಿಕ ಕಥೆಗಾರ, ಕವಿ, ವಿಮರ್ಶಕ, ಸಂಪಾದಕ, ಪ್ರಕಾಶಕರಾಗಿ ತಮ್ಮದೇ ಛಾಪು ಮೂಡಿಸಿದ್ದಾರೆ.