ಮುಲ್ಕಿ , ಮಾ. 18 (DaijiworldNews/ AK): ಸುಂದರ ರಾಮ ಶೆಟ್ಟಿ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ ಇದರ ವತಿಯಿಂದ ಸಹಾಯ ಹಸ್ತ ಪ್ರದಾನ ಸಮಾರಂಭ ಮುಲ್ಕಿ ಸುಂದರ ರಾಮ ಶೆಟ್ಟಿ ಸಭಾಭವನದಲ್ಲಿ ಜರುಗಿತು.


ಕಾರ್ಯಕ್ರಮದಲ್ಲಿ ಮುಲ್ಕಿ ಸುಂದರ ರಾಮ ಶೆಟ್ಟಿ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ ಇದರ ಅಧ್ಯಕ್ಷ ಡಾ.ಕೆ.ಪ್ರಕಾಶ್ ಶೆಟ್ಟಿ ಮಾತನಾಡಿ, “ಸುಂದರ ರಾಮ ಶೆಟ್ಟಿಯವರ ಸ್ಮರಣಾರ್ಥ ಭವನವನ್ನು ನಿರ್ಮಿಸಲು ನನ್ನನ್ನು ಸಂಚಾಲಕನನ್ನಾಗಿ ಆಯ್ಕೆ ಮಾಡಿದರು ಆಗ ಅದನ್ನು ಅತ್ಯಂತ ಪ್ರೀತಿಯಿಂದ ಕೈಗೆತ್ತಿಕೊಂಡವನು ನಾನು. ನಂತರ ನಾಲ್ಕು ವರ್ಷಗಳ ಹಿಂದೆ ಮುಲ್ಕಿಯಲ್ಲಿ 34 ಕೋಟಿ ರೂ. ವೆಚ್ಚದಲ್ಲಿ ಭವ್ಯವಾದ ಭವನವನ್ನು ನಿರ್ಮಾಣ ಮಾಡಲಾಯಿತು. ಸುಂದರ ರಾಮ ಶೆಟ್ಟಿಯವರಿಂದ ಇಂದಿಗೂ ಸಮಾಜದ ಅದೆಷ್ಟೋ ಮನೆಗಳಲ್ಲಿ ದೀಪ ಬೆಳಗುತ್ತಿದೆ. ಅವರಿಂದ ಎಷ್ಟೋ ಕುಟುಂಬಗಳಿಗೆ ನೆಮ್ಮದಿ ಸಿಕ್ಕಿದೆ. ಇಲ್ಲಿ ಸಹಾಯಹಸ್ತ ಸ್ವೀಕರಿಸಿದವರು ಮುಂದೆ ತಾವೂ ಕೂಡ ಸುಂದರ ರಾಮ ಶೆಟ್ಟಿಯವರಂತಾಗಬೇಕು. ನಾವು ಮಾಡುವ ಸಂಪಾದನೆ ಸಮಾಜಕ್ಕೆ ದಾರಿದೀಪವಾಗಬೇಕು“ ಎಂದು ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತಾಡಿದ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು, ಇಲ್ಲಿ ಆರ್ಥಿಕ ನೆರವು ಪಡೆದವರು ಮುಂದೆ ಜೀವನದಲ್ಲಿ ಇನ್ನಷ್ಟು ಮಂದಿಗೆ ಸಹಾಯಹಸ್ತ ಚಾಚುವಂತಾಗಬೇಕು” ಎಂದರು. ಮೂಲ್ಕಿ ಮೂಡಬಿದ್ರೆ ಕ್ಷೇತ್ರದ ಶಾಸಕ ಎ ಉಮಾನಾಥ್ ಕೋಟ್ಯಾನ್ ಮಾತಾಡಿ ಶುಭಹಾರೈಸಿದರು..
ದಾಯ್ಜಿವರ್ಲ್ಡ್ ಸಮೂಹ ಮಾಧ್ಯಮಗಳ ಸಂಸ್ಥಾಪಕ ವಾಲ್ಟರ್ ನಂದಳಿಕೆ ಮಾತಾಡಿ, “ಮುಲ್ಕಿ ಸುಂದರ ರಾಮ ಶೆಟ್ಟಿಯವರಂತೆಯೇ ಬದುಕುತ್ತಿರುವ ಪ್ರಕಾಶ್ ಶೆಟ್ಟಿ ಅವರದ್ದು ಅಪರೂಪದ ವ್ಯಕ್ತಿತ್ವ. ಇಂದಿಲ್ಲಿ ಸಹಾಯಹಸ್ತ ಪಡೆದ ವಿದ್ಯಾರ್ಥಿಗಳು ಮುಂದೆ ಜೀವನದಲ್ಲಿ ಸಾಧನೆಯನ್ನು ಮಾಡಿ ಸಮಾಜದ ಇನ್ನಷ್ಟು ಜನರಿಗೆ ನೆರವಾಗಬೇಕು” ಎಂದರು.
ವೇದಿಕೆಯಲ್ಲಿ ಕಾಪು ವಿಧಾನಸಭಾ ಕ್ಷೇತ್ರದ ಶಾಸಕ ಸುರೇಶ್ ಶೆಟ್ಟಿ ಗುರ್ಮೆ, ಮೂಲ್ಕಿ ಸುಂದರ ರಾಮ ಶೆಟ್ಟಿ ಅವರ ಸುಪುತ್ರ ಹರಿಪ್ರಸಾದ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಈ ಬಾರಿ ಮುಲ್ಕಿ ಸುಂದರರಾಮ ಶೆಟ್ಟಿ ಸ್ಮಾರಕ ಚಾರಿಟೇಬಲ್ ಟ್ರಸ್ಟ್ ವತಿಯಿಂದ 300 ಕುಟುಂಬಗಳಿಗೆ ಹಾಗೂ ವಿದ್ಯಾಸಂಸ್ಥೆಗಳಿಗೆ ಒಟ್ಟು 50 ಲಕ್ಷ ರೂಪಾಯಿಗಳ ಸಹಾಯ ಧನವನ್ನು ವಿತರಿಸಲಾಯಿತು.