ಬಂಟ್ವಾಳ, ಮಾ. 18 (DaijiworldNews/T A): ತಾಲೂಕಿನ ನಂದಾವರ ಪ್ರದೇಶದಲ್ಲಿ ಧಾರ್ಮಿಕ ಸೌಹಾರ್ದತೆಯ ಅಪೂರ್ವ ನಿದರ್ಶನ ಮತ್ತೊಮ್ಮೆ ಕಂಡುಬಂದಿದೆ. ಅರಸರ ಕಾಲದಿಂದಲೂ ನಡೆದುಕೊಂಡು ಬರುತ್ತಿರುವ ಪರಂಪರೆಯಂತೆ, ಮಸೀದಿ ಪ್ರಮುಖರು ದೈವದ ಭಂಡಾರಕ್ಕೆ ‘ಸೀಯಾಳ’ ಒಪ್ಪಿಸುವ ಪದ್ದತಿಯನ್ನು ಈ ವರ್ಷವೂ ಮುಂದುವರಿಸಿದ್ದಾರೆ.

ನಂದಾವರ ದೇವಸ್ಥಾನದ ಸಮೀಪವಿರುವ ಕೇಂದ್ರ ಜುಮಾ ಮಸೀದಿಯಲ್ಲಿ ಈ ವಿಶಿಷ್ಟ ಆಚರಣೆ ನಡೆಯುತ್ತದೆ. ಮಸೀದಿ ಸಮೀಪವೇ ಮೂರು ವರ್ಷಕ್ಕೊಮ್ಮೆ ನಡೆಯುವ ಮಂಜದಗೋಳಿ ಜಾತ್ರೆ ಈ ಭಾಗದ ಪ್ರಮುಖ ಧಾರ್ಮಿಕ ಉತ್ಸವವಾಗಿದೆ.
ಜಾತ್ರೆಯ ಅಂಗವಾಗಿ, ಸಜೀಪನಡು ಮೂಲಸ್ಥಾನದಿಂದ ಭಂಡಾರ ಮಂಜದಗೋಳಿ ಕ್ಷೇತ್ರಕ್ಕೆ ಆಗಮಿಸುವ ಮೊದಲು, ದಾರಿಯಲ್ಲಿರುವ ಮಸೀದಿಯ ನಾಲ್ಕು ಮೆಟ್ಟಿಲುಗಳನ್ನು ಹತ್ತಿ ದೈವ ‘ಸೀಯಾಳ’ ಸ್ವೀಕರಿಸುವ ಪದ್ದತಿ ಅನಾದಿಕಾಲದಿಂದಲೂ ನಡೆದುಕೊಂಡು ಬಂದಿದೆ.
ಮಾರ್ಚ್ 17ರಂದು ನಡೆದ ಜಾತ್ರೆಯಲ್ಲೂ ಇದೇ ಸಂಪ್ರದಾಯ ಪಾಲಿಸಲ್ಪಟ್ಟಿದ್ದು, ದೈವ ಮಸೀದಿಯ ಮೆಟ್ಟಿಲುಗಳನ್ನು ಹತ್ತಿ ಸೀಯಾಳ ಸ್ವೀಕರಿಸಿತು. ಈ ಮೂಲಕ ಮಸೀದಿ ಹಾಗೂ ದೇವಸ್ಥಾನಗಳ ನಡುವಿನ ಸೌಹಾರ್ದತೆ ಮತ್ತೊಮ್ಮೆ ಮೆರೆಯಿತು. ಹಿಂದಿನಿಂದಲೂ ಬಂದಿರುವ ಈ ಪದ್ದತಿಯನ್ನು ಮಸೀದಿ ಪ್ರಮುಖರು ಇಂದಿಗೂ ಕಾಪಾಡಿಕೊಂಡು ಬರುತ್ತಿರುವುದು ಸಮಾಜದಲ್ಲಿ ಸಹಬಾಳ್ವೆ ಮತ್ತು ಪರಸ್ಪರ ಗೌರವದ ಮಹತ್ವವನ್ನು ಸಾರುತ್ತಿದೆ.