ಬಂಟ್ವಾಳ, ಮಾ. 18 (DaijiworldNews/T A): ಪುರಸಭಾ ವ್ಯಾಪ್ತಿಯ ನೇರಂಬೋಳು ಪ್ರದೇಶದಲ್ಲಿ ಕುಡಿಯುವ ನೀರಿಗೆ ತೀವ್ರ ಸಂಕಷ್ಟ ಉಂಟಾಗಿದ್ದು, ಗ್ರಾಮಸ್ಥರು ಕಂಗಾಲಾಗಿದ್ದಾರೆ. ಕಳೆದ ಮೂರು ತಿಂಗಳಿಂದ ಸಮರ್ಪಕವಾಗಿ ನೀರು ಪೂರೈಕೆ ಆಗದ ಹಿನ್ನೆಲೆಯಲ್ಲಿ, ಇಲ್ಲಿ ಎರಡು ದಿನಕ್ಕೊಮ್ಮೆ ಕೇವಲ ಅರ್ಧ ಗಂಟೆ ಮಾತ್ರ ನೀರು ಸರಬರಾಜಾಗುತ್ತಿದೆ.






ಅದೂ ಸಹ ಅಲ್ಪ ಪ್ರಮಾಣದಲ್ಲಿ ಬರುತ್ತಿದ್ದು, ದಿನನಿತ್ಯದ ಅಗತ್ಯಗಳಿಗೆ ಸಾಕಾಗುತ್ತಿಲ್ಲ. ನೀರಿನ ಕೊರತೆಯಿಂದ ಮನೆಯ ಕೆಲಸಗಳು ಕಷ್ಟಕರವಾಗಿದ್ದು, ಟ್ಯಾಂಕರ್ ನೀರಿನ ಅವಲಂಬನೆ ಹೆಚ್ಚಾಗಿದೆ. ಆರ್ಥಿಕವಾಗಿ ಹಿಂದುಳಿದ ಕುಟುಂಬಗಳು ಇದರಿಂದ ಸಂಕಷ್ಟಕ್ಕೆ ಸಿಲುಕಿವೆ. ಕೆಲವರು ಬಟ್ಟೆ ಒಗೆಯಲು ದೂರದ ನೇತ್ರಾವತಿ ನದಿ ತೀರಕ್ಕೆ ತೆರಳುವ ಪರಿಸ್ಥಿತಿಯೂ ನಿರ್ಮಾಣವಾಗಿದೆ.
ಈ ಪ್ರದೇಶಕ್ಕೆ ನೀರು ಸರಬರಾಜು ಮಾಡುವ ಯೋಜನೆ ಆರಂಭದಲ್ಲಿ 24 ಗಂಟೆ ನೀರು ನೀಡುವ ಭರವಸೆ ನೀಡಿದ್ದರೂ, ಈಗ ಅರ್ಧ ಗಂಟೆಯೂ ಸರಿಯಾಗಿ ನೀರು ಸಿಗುತ್ತಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಂಡು ಶಾಶ್ವತ ಪರಿಹಾರ ಒದಗಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.