ಮಂಗಳೂರು, ಮಾ. 19 (DaijiworldNews/T A): ಅಕ್ರಮ ಕೋಳಿ ಅಂಕದ ಅಡ್ಡೆಗೆ ಪೊಲೀಸರು ದಾಳಿ ನಡೆಸಿದ್ದು, ಆರು ಮಂದಿ ಆರೋಪಿಗಳನ್ನು ಬಂಧಿಸಿರುವ ಘಟನೆ ಮಂಗಳೂರು ನಗರ ಕಮಿಷನರೇಟ್ ವ್ಯಾಪ್ತಿಯ ಮೂಡುಬಿದರೆಯಲ್ಲಿ ನಡೆದಿದೆ.


ಮಂಗಳೂರು ನಗರ ಕಮಿಷನರೇಟ್ ವ್ಯಾಪ್ತಿಯ ಮೂಡುಮೂರ್ನಾಡು ಗ್ರಾಮದ ಹೊಯಿಪಾಲಬೆಟ್ಟು ಪ್ರದೇಶದಲ್ಲಿ ಮಾರ್ಚ್ 18 ರಂದು, ಜಾತ್ರೆ ಮುಗಿದ ಬಳಿಕ ಕೆಲವು ವ್ಯಕ್ತಿಗಳು ಅಕ್ರಮವಾಗಿ ಸೇರಿಕೊಂಡು ಕೋಳಿ ಅಂಕ ನಡೆಸುತ್ತಿರುವ ಬಗ್ಗೆ ಮಾಹಿತಿ ದೊರಕಿತ್ತು. ಕೋಳಿಗಳಿಗೆ ಹರಿತವಾದ ಬಾಳುಗಳನ್ನು ಕಟ್ಟಿ, ಹಿಂಸಾತ್ಮಕವಾಗಿ ಕಾದಾಡಲು ಬಿಡಲಾಗುತ್ತಿದ್ದು, ಹಣವನ್ನು ಪಣವಾಗಿ ಇಟ್ಟು ಜೂಜಾಟ ನಡೆಯುತ್ತಿತ್ತು. ಮೂಡುಬಿದರೆ ಪೊಲೀಸರು ದಾಳಿ ನಡೆಸಿ, ಸ್ಥಳದಲ್ಲಿದ್ದ 6 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ಅಲ್ಲದೆ, ಕೋಳಿ ಅಂಕಕ್ಕೆ ಬಳಸಲಾಗುತ್ತಿದ್ದ 17 ಜೀವಂತ ಕೋಳಿಗಳು, ಎರಡು ಬಾಳುಗಳು ಹಾಗೂ 1,480 ರೂ ಹಣವನ್ನು ವಶಕ್ಕೆ ಪಡೆದಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ನ್ಯಾಯ ಸಂಹಿತೆ ಜೊತೆಗೆ ಪ್ರಾಣಿ ಹಿಂಸಾ ಪ್ರತಿಬಂಧಕ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.