ಕಾರ್ಕಳ, ಮಾ. 22 (DaijiworldNews/AA): ಹಿರಿಯಂಗಡಿ ಹಿಂದೂ ರುದ್ರಭೂಮಿಯಲ್ಲಿ ಸಂಗ್ರಹಿಸಿದ್ದ ಮರದ ವಿವಿಧ ಆಕಾರದ ಪರಿಕರಗಳಿಗೆ ಬೆಂಕಿ ತಗುಲಿದ ಪರಿಣಾಮ ಅವುಗಳು ಸುಟ್ಟು ಕರಕಲಾಗಿರುವ ಘಟನೆ ಭಾನುವಾರ ಮಧ್ಯಾಹ್ನ ನಡೆದಿದೆ.



ಬೆಂಕಿಯ ಜ್ವಾಲೆಗಳು ಪಕ್ಕದಲ್ಲಿ ನಿಲ್ಲಿಸಿದ್ದ ಶವಸಂಸ್ಕಾರ ವಾಹನಕ್ಕೂ ಸ್ವಲ್ಪ ಪ್ರಮಾಣದಲ್ಲಿ ತಗುಲಿದೆ. ಸಕಾಲದಲ್ಲಿ ಸ್ಥಳಕ್ಕೆ ಧಾವಿಸಿದ ಕಾರ್ಕಳ ಅಗ್ನಿಶಾಮಕ ದಳದ ಸಿಬ್ಬಂದಿಗಳ ತ್ವರಿತ ಕಾರ್ಯಾಚರಣೆಯಿಂದಾಗಿ ಹೆಚ್ಚಿನ ಅನಾಹುತ ತಪ್ಪಿದೆ ಎಂದು ತಿಳಿದುಬಂದಿದೆ.
ಘಟನೆಯ ಮಾಹಿತಿ ತಿಳಿದ ತಕ್ಷಣವೇ ಅಗ್ನಿಶಾಮಕ ದಳದ ಠಾಣಾಧಿಕಾರಿ ಆಲ್ಬರ್ಟ್ ಮೋನಿಸ್ ಅವರ ನೇತೃತ್ವದಲ್ಲಿ ಸಹಠಾಣಾಧಿಕಾರಿ ಚಂದ್ರಶೇಖರ್ ಹಾಗೂ ಸಿಬ್ಬಂದಿಗಳಾದ ರೂಪೇಶ್, ಚಾಲಕ ಆಲ್ವಿನ್, ದಿನೇಶ್ ಮತ್ತು ಭೀಮಪ್ಪ ಅವರು ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದು ಅಪಾರ ಸೊತ್ತುಗಳನ್ನು ರಕ್ಷಿಸಿದರು. ಈ ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ನಡೆಯುತ್ತಿದೆ.