ಮಂಗಳೂರು, ಮಾ. 22 (DaijiworldNews/AA): 16,714 ಮೆಟ್ರಿಕ್ ಟನ್ ಎಲ್ಪಿಜಿ ಹೊತ್ತ ಪಿಕ್ಸಿಸ್ ಪಯನೀರ್ ಹಡಗು ನವಮಂಗಳೂರು ಬಂದರಿಗೆ ಭಾನುವಾರ ಬೆಳಿಗ್ಗೆ ಆಗಮಿಸಿದೆ. ಸ್ಥಳೀಯ ವಿತರಣೆಗಾಗಿ ಈ ನೌಕೆಯು ಬೃಹತ್ ಪ್ರಮಾಣದ ಎಲ್ಪಿಜಿ ಹೊತ್ತು ತಂದಿದೆ.

ಇರಾನ್ ಹಾಗೂ ಇಸ್ರೇಲ್ ಯುದ್ಧ ಶುರುವಾದ ಬಳಿಕ ರಾಜ್ಯಕ್ಕೆ ಆಗಮಿಸಿದ ಮೊದಲ ಹಡಗು ಇದಾಗಿದೆ. ನವಮಂಗಳೂರು ಬಂದರಿಗೆ ಆಗಮಿಸಿರುವ 'ಪಿಕ್ಸಿಸ್ ಪಯೋನಿಯರ್' ಹೆಸರಿನ ಎಲ್ಪಿಜಿ ಕಾರ್ಗೋ ಹಡಗಿನಿಂದ ಸರಕು ಇಳಿಸುವ ಕಾರ್ಯವೂ ಪ್ರಗತಿಯಲ್ಲಿದೆ. ಅಮೆರಿಕದ ಟೆಕ್ಸಾಸ್ನಿಂದ ಹೊರಟಿದ್ದ ಈ ಹಡಗು 16,714 ಮೆಟ್ರಿಕ್ ಟನ್ ಎಲ್ಪಿಜಿ ಹೊತ್ತು ತಂದಿದ್ದು, ಬಂದರಿನಲ್ಲಿ ಅಗತ್ಯ ಸುರಕ್ಷತಾ ಕ್ರಮಗಳೊಂದಿಗೆ ಎಲ್ಪಿಜಿ ಇಳಿಸುವ ಪ್ರಕ್ರಿಯೆ ಸಾಗುತ್ತಿದೆ. ವಿದೇಶದಿಂದ ರಾಜ್ಯಕ್ಕೆ ಆಗಮಿಸಿದ ಮೊದಲ ಎಲ್ಪಿಜಿ ಹಡಗು ಇದಾಗಿದ್ದು, ಇಂಧನ ಪೂರೈಕೆಯ ದೃಷ್ಟಿಯಿಂದ ಈ ಕಾರ್ಯಾಚರಣೆಗಳು ಅತ್ಯಂತ ಪ್ರಮುಖವಾಗಿವೆ.
"ಕಾರ್ಯಾಚರಣೆಗಳು ಸುಗಮವಾಗಿ ನಡೆಯುತ್ತಿದ್ದು, ಹಡಗು ನಾಳೆ ಬೆಳಿಗ್ಗೆಯೊಳಗೆ ಅನ್ಲೋಡ್ ಪ್ರಕ್ರಿಯೆಯನ್ನು ಪೂರ್ಣಗೊಳಿಸುವ ನಿರೀಕ್ಷೆಯಿದೆ" ಎಂದು ಬಂದರು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬೃಹತ್ ಪ್ರಮಾಣದ ಕಚ್ಚಾತೈಲ ಹೊತ್ತು ನವಮಂಗಳೂರು ಬಂದರಿಗೆ ಆಗಮಿಸಿರುವ 'ಆಕ್ವಾ ಟೈಟನ್' ಹಡಗಿನಿಂದ ಎಂಆರ್ಪಿಎಲ್ ತೈಲ ಸಂಸ್ಕರಣಾ ಘಟಕಕ್ಕೆ ತೈಲ ಪೂರೈಕೆ ಮಾಡುವ ಕಾರ್ಯ ಭರದಿಂದ ಸಾಗುತ್ತಿದೆ. ರಷ್ಯಾದಿಂದ ಆಗಮಿಸಿರುವ ಈ ನೌಕೆಯಲ್ಲಿದ್ದ ಸುಮಾರು 96,000 ಮೆಟ್ರಿಕ್ ಟನ್ ಕಚ್ಚಾತೈಲವನ್ನು ಪೂರೈಸುವ ಈ ಪ್ರಕ್ರಿಯೆಯು ನಾಳೆ ಸಂಜೆಯ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.