ಬೆಂಗಳೂರು ಡಿ 19 : ಗುಜರಾತ್ ಹಾಗೂ ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಗೆಲುವಿನ ನಗೆ ಬೀರಿ ಮೆರೆಯುತ್ತಿರುವಾಗಲೇ ಕರ್ನಾಟಕದಲ್ಲಿನ ಕೈ ಪಾಳಯದಲ್ಲಿ ಗಲಿಬಿಲಿ ಶುರುವಾಗಿದೆ. ಕರ್ನಾಟಕ ವಿಧಾನಸಭಾ ಚುನಾವಣೆಗೆ ಇನ್ನು ಕೆಲವೇ ತಿಂಗಳು ಬಾಕಿ ಇರುವಂತೆ ಕಾಂಗ್ರೆಸ್ ನಾಯಕರು ಕರ್ನಾಟಕದಲ್ಲಿ ಬಿಜೆಪಿಯ ಹಡೆಮುರಿಕಟ್ಟಲು ತಂತ್ರ ರೂಪಿಸುತ್ತಿದ್ದಾರೆ. ಇದಕ್ಕಾಗಿ ಎಐಸಿಸಿ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ರಾಹುಲ್ ಗಾಂಧಿ ಕರ್ನಾಟಕಕ್ಕೆ ನೀಡುವ ಮೊದಲ ಭೇಟಿಯನ್ನು ಅವಿಸ್ಮರಣೀಯವಾಗಿಸಲು ರಾಜ್ಯ ಕಾಂಗ್ರೆಸ್ ನಾಯಕರು ತೀರ್ಮಾನಿಸಿದ್ದಾರೆ. ಈ ಮೂಲಕ ಕರ್ನಾಟಕದಲ್ಲದರೂ ಶತಾಯಗತಾಯ ಕಾಂಗ್ರೆಸ್ ಪಕ್ಷವನ್ನು ಬಲಿಷ್ಟವಾಗಿಸಬೇಕೆನ್ನುವುದು ರಾಜ್ಯ ನಾಯಕರ ನಿಲುವು. ಹೀಗಾಗಿ ರಾಹುಲ್ ಗಾಂಧಿಯನ್ನು ಡಿಸೆಂಬರ್ ತಿಂಗಳ ಕೊನೆಯ ವಾರ ಅಥವಾ ಜನವರಿ ಮೊದಲ ವಾರದಲ್ಲಿ ಕರ್ನಾಟಕಕ್ಕೆ ಆಹ್ವಾನಿಸುವ ಸಾಧ್ಯತೆ ಇದೆ. ಇದಕ್ಕಾಗಿ ಈಗಾಗಲೇ ಮಾಸ್ಟರ್ ಪ್ಲಾನ್ ಸಿದ್ದವಾಗಿದ್ದು, ಇಂದಿರಾ ಗಾಂಧಿಯವರನ್ನು ಗೆಲ್ಲಿಸಿದ್ದ ಚಿಕ್ಕಮಗಳೂರು ಅಥವಾ ಸೋನಿಯಾ ಗಾಂಧಿಯವರನ್ನು ಗೆಲ್ಲಿಸಿದ್ದ ಬಳ್ಳಾರಿಯಲ್ಲಿ ಬೃಹತ್ ಸಮಾವೇಶ ನಡೆಸುವ ಮೂಲಕ ಸ್ವಾಗತ ಹಾಗೂ ಚುನಾವಣಾ ಪ್ರಚಾರ ಎರಡನ್ನೂ ನೆರವೇರಿಸಲು ನಿರ್ಧರಿಸಿದ್ದಾರೆ ಎನ್ನುವ ಸುದ್ದಿ ಹೊರಬಿದ್ದಿದೆ.
ಇದೆಲ್ಲದರ ನಡುವೆ ರಾಹುಲ್ ಕೂಡಾ ತನ್ನ ಹಳೆ ಇಮೇಜ್ ನ್ನು ಬದಲಾಯಿಸಿಕೊಳ್ಳಲು ಪರದಾಡುತ್ತಿದ್ದಾರೆ. ಗುಜರಾತ್ ಚುನಾವಣೆಯಲ್ಲಿ ಅಧಿಕಾರ ಹಿಡಿಯುವಲ್ಲಿ ಬಿಜೆಪಿ ಸಫಲವಾಗಿದ್ದರೆ, ಜನ ಬೆಂಬಲ ಗಳಿಸುವಲ್ಲಿ ಕಾಂಗ್ರೆಸ್ ಸಫಲವಾಗಿದೆ. ಹೀಗಾಗಿ ಕರ್ನಾಟಕದಲ್ಲಿ ಮುಂದಿರುವ ಚುನಾವಣೆಯನ್ನು ಎರಡೂ ಪಕ್ಷಗಳಿಗೂ ಲಘುವಾಗಿ ತೆಗೆದುಕೊಳ್ಳಲು ಸಾಧ್ಯವಿಲ್ಲ. ಸದ್ಯ ಕೇವಲ ನಾಲ್ಕು ರಾಜ್ಯಗಳಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ಗೆ ಕರ್ನಾಟಕವೇ ಅತಿದೊಡ್ಡ ರಾಜ್ಯ. ಇದರಿಂದ ಇಲ್ಲಿ ರಾಹುಲ್ಗೆ ಹೆಚ್ಚಿನ ಬೆಂಬಲ ವ್ಯಕ್ತವಾದರೆ ಅವರ ಇಮೇಜ್ ಕೂಡ ಹೆಚ್ಚಲಿದೆ. ಪಕ್ಷಕ್ಕೂ ಇದರಿಂದ ಲಾಭವಾಗಲಿದೆ ಎನ್ನುವುದು ರಾಜ್ಯ ನಾಯಕರ ಲೆಕ್ಕಾಚಾರವಾಗಿದೆ.