ಕುಂದಾಪುರ, ಏ. 07 (DaijiworldNews/AA): ರಾಷ್ಟ್ರೀಯ ಹೆದ್ದಾರಿ 66ರ ಮುಳ್ಳಿಕಟ್ಟೆ ಜಂಕ್ಷನ್ನಲ್ಲಿ ಏಪ್ರಿಲ್ 6ರಂದು ಕಾರು, ಲಾರಿ ಮತ್ತು ಸ್ಕೂಟರ್ ನಡುವೆ ನಡೆದ ಸರಣಿ ಅಪಘಾತದಲ್ಲಿ ನಾಲ್ವರು ಗಾಯಗೊಂಡಿದ್ದಾರೆ.

ಪಾದಚಾರಿ ಸೂರ್ಯ ಖಾರ್ವಿ, ಸ್ಕೂಟರ್ ಸವಾರ ಮಂಜುನಾಥ್ ಹಾಗೂ ಕಾರಿನಲ್ಲಿದ್ದ ವತ್ಸಲಾ ಮತ್ತು ಚಾಲಕ ಸತೀಶ್ ಶೆಟ್ಟಿ ಗಾಯಗೊಂಡವರು ಎಂದು ಗುರುತಿಸಲಾಗಿದೆ.
ಸತೀಶ್ ಅವರು ಚಲಾಯಿಸುತ್ತಿದ್ದ ಕಾರು ಅತೀ ವೇಗದಿಂದ ಬಂದು ಮೊದಲು ಮುಂದೆ ಚಲಿಸುತ್ತಿದ್ದ ಲಾರಿಗೆ ಢಿಕ್ಕಿ ಹೊಡೆದಿದೆ. ಬಳಿಕ ರಸ್ತೆ ಬದಿಯಲ್ಲಿದ್ದ ಪಾದಚಾರಿ ಸೂರ್ಯ ಅವರಿಗೆ ಢಿಕ್ಕಿ ಹೊಡೆದು, ನಂತರ ಕುಂದಾಪುರ ಕಡೆಗೆ ತೆರಳುತ್ತಿದ್ದ ಮಂಜುನಾಥ್ ಅವರ ಸ್ಕೂಟರ್ಗೆ ಢಿಕ್ಕಿಯಾಗಿದೆ.
ಸೂರ್ಯ ಖಾರ್ವಿ ಅವರತಲೆ ಮತ್ತು ಕೈಕಾಲುಗಳಿಗೆ ತೀವ್ರ ಸ್ವರೂಪದ ಗಾಯಗಳಾಗಿವೆ. ಮಂಜುನಾಥ್ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಸ್ಥಳೀಯ ನಿವಾಸಿಗಳು ಮತ್ತು ಗಂಗೊಳ್ಳಿ 24x7 ಅಂಬುಲೆನ್ಸ್ ಚಾಲಕ ಇಬ್ರಾಹಿಂ ಗಂಗೊಳ್ಳಿ ಅವರ ಸಹಕಾರದೊಂದಿಗೆ ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಪಘಾತದ ತೀವ್ರತೆಗೆ ಕಾರು ಸಂಪೂರ್ಣವಾಗಿ ಜಖಂಗೊಂಡಿದ್ದು, ಸ್ಕೂಟರ್ ರಸ್ತೆಯ ಬದಿಗೆ ಎಸೆಯಲ್ಪಟ್ಟಿದೆ. ಲಾರಿಯ ಮುಂಭಾಗದ ಎಡಭಾಗಕ್ಕೂ ಹಾನಿಯಾಗಿದೆ. ಕಾರು ಚಾಲಕನ ಅತಿ ವೇಗ ಮತ್ತು ನಿರ್ಲಕ್ಷ್ಯದ ಚಾಲನೆಯೇ ಈ ಅಪಘಾತಕ್ಕೆ ಕಾರಣ ಎಂದು ಹೇಳಲಾಗಿದೆ.
ಲಾರಿ ಚಾಲಕ ಶ್ರೀಧರ್ ನಾಯ್ಕ್ ನೀಡಿದ ದೂರಿನ ಮೇರೆಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.