ಮಂಗಳೂರು,ಏ. 10 (DaijiworldNews/AK): ಕ್ರಿಮಿನಲ್ ಪ್ರಕರಣವೊಂದರಲ್ಲಿ ಭಾಗಿಯಾಗಿ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಪ್ರಮುಖ ಆರೋಪಿಯನ್ನು ಪತ್ತೆಹಚ್ಚಲು ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ಇಂಟರ್ಪೋಲ್ ಮೂಲಕ ರೆಡ್ ಕಾರ್ನರ್ ನೋಟಿಸ್ (ಆರ್ಸಿಎನ್) ಹೊರಡಿಸಿದೆ.

ಆರೋಪಿಯನ್ನು ಶಂಸುದ್ದೀನ್ (36) ಎಂದು ಗುರುತಿಸಲಾಗಿದ್ದು, ಆತನ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಲಾಗಿದೆ.
2008 ರಲ್ಲಿ ಮುಲ್ಕಿಯ ಪಾವಂಜೆ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರವೀಣ್ ಎಂಬ ವ್ಯಕ್ತಿಯನ್ನು ಅಪಹರಿಸಿದ ಶಂಸುದ್ದೀನ್ (ಅಲ್ತಾಫ್, ಅಲ್ತಾಫ್ ಇಮ್ರಾನ್ ಮತ್ತು ಇಮ್ರಾನ್) ಆತನ ಸಹಚರರೊಂದಿಗೆ ಸೇರಿ, ಆತನ ಕಾರು ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ದೋಚಿದ್ದರು. ನಂತರ ಕಳವಾರು ಬಳಿಯ ಕ್ವಾರಿಗೆ ಕರೆದೊಯ್ದು, ನೀರಿನಲ್ಲಿ ಮುಳುಗಿಸಿ ಕೊಲೆ ಮಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಎಲ್ಲಾ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು.
ಆದರೆ, ಶಂಸುದ್ದೀನ್ ನಕಲಿ ದಾಖಲೆಗಳನ್ನು ಪಡೆದು ಶೇಖ್ ಮೊಹಮ್ಮದ್ ಸಿದ್ದೀಕ್ ಎಂದು ಹೆಸರು ಬದಲಾಯಿಸಿಕೊಂಡು ಪರಾರಿಯಾಗಿದ್ದ. ಈ ನಕಲಿ ದಾಖಲೆಗಳನ್ನು ಬಳಸಿ ಪಾಸ್ಪೋರ್ಟ್ ಪಡೆದು ವಿದೇಶಕ್ಕೆ ಪರಾರಿಯಾಗಿದ್ದ.
ಆತ ಪ್ರಸ್ತುತ ಸೌದಿ ಅರೇಬಿಯಾದಲ್ಲಿ ವಾಸಿಸುತ್ತಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ.