ಬಂಟ್ವಾಳ , ಏ. 10 (DaijiworldNews/AK): ಈ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ ಘೋಷಣೆಯಾಗಿದ್ದು ಎಲ್ಲೆಡೆ ವಿದ್ಯಾರ್ಥಿಗಳ ಫಲಿತಾಂಶದ ಕಲರವ ಕೇಳುತ್ತಿರುವಾಗ ಬಂಟ್ವಾಳ ನಿವಾಸಿಗಳಾದ ಅಮ್ಮ ಮತ್ತು ಮಗಳು ಏಕಕಾಲದಲ್ಲಿ ಉತ್ತೀರ್ಣರಾಗುವ ಮೂಲಕ ಸಾಧನೆ ಮಾಡಿದ್ದಾರೆ.

ಬಿ.ಸಿ. ರೋಡಿನ ಕೈಕಂಬ ನಿವಾಸಿ ಗೃಹಿಣಿ ನೇತ್ರಾವತಿ ವಿ.ಆರ್ ಅವರು ದ್ವಿತೀಯ ಪಿಯುಸಿ ಪಾಸಾಗಬೇಕೆಂಬ ಉತ್ಕಟ ಇಚ್ಚೆಯನ್ನು ಹೊಂದಿದ್ದು ಈ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗೆ ಖಾಸಗಿ ಅಭ್ಯರ್ಥಿಯಾಗಿ ನೋಂದಾಯಿಸಿಕೊಂಡಿದ್ದರು.
ಸರಕಾರಿ ಪದವಿಪೂರ್ವ ಕಾಲೇಜು ಮೊಂಟೆಪದವು ಮೂಲಕ ಪರೀಕ್ಷೆಗೆ ಹಾಜರಾಗಿದ್ದ ಇವರು ತನ್ನ ಪ್ರಥಮ ಪ್ರಯತ್ನದಲ್ಲೇ ಕಲಾ ವಿಭಾಗದಲ್ಲಿ ಉತ್ತೀರ್ಣರಾಗಿದ್ದು 257 ಅಂಕಗಳನ್ನು ಪಡೆದಿರುತ್ತಾರೆ.
ಇವರ ಮಗಳು ಹೇಮಶ್ರೀ ಆರ್ ಸರಕಾರಿ ಪದವಿಪೂರ್ವ ಕಾಲೇಜು ಬಿ.ಮೂಡ ಇಲ್ಲಿನ ವಿದ್ಯಾರ್ಥಿನಿಯಾಗಿದ್ದು ಈ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಕಲಾ ವಿಭಾಗದಲ್ಲಿ 562 ಅಂಕಗಳನ್ನು ಪಡೆದು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಕಾಲೇಜಿಗೆ ಪ್ರಥಮ ಸ್ಥಾನದಲ್ಲಿ ಹೊರಹೊಮ್ಮಿದ್ದಾರೆ. ಪತ್ನಿ ಮತ್ತು ಮಗಳು ಏಕಕಾಲದಲ್ಲಿ ಉತ್ತೀರ್ಣರಾದ ಸಂತಸವನ್ನು ಕುಟುಂಬದ ಮುಖ್ಯಸ್ಥ ಶಿಕ್ಷಕ ರವಿಕುಮಾರ್ ಮಾಧ್ಯಮದ ಜೊತೆ ಹಂಚಿಕೊಂಡಿದ್ದಾರೆ.