ಮಂಗಳೂರು, ಏ. 10 (DaijiworldNews/TA) : ಮೀನುಗಾರಿಕಾ ಧಕ್ಕೆಯಲ್ಲಿ ಕಾರ್ಯಾಚರಿಸುತ್ತಿರುವ ಮಂಗಳೂರು ಕರಾವಳಿ ಅಲ್ಪಸಂಖ್ಯಾತ ಪ್ರಾಥಮಿಕ ಮೀನುಗಾರರ ಸಂಘದ ಪೆಟ್ರೋಲ್ ಪಂಪ್ ನಲ್ಲಿ, ಮೀನುಗಾರಿಕೆ ದೋಣಿಗಳಿಗೆ ವ್ಯವಸ್ಥಿತ ರೀತಿಯಲ್ಲಿ ಡೀಸೆಲ್ ಪೂರೈಕೆಯಾಗದೆ ತೊಂದರೆಯಾಗಿದೆ. ಟೋಕನ್ ವ್ಯವಸ್ಥೆಯಡಿ ಸಮರ್ಪಕವಾಗಿ ಡೀಸೆಲ್ ಪೂರೈಸುವ ಮೂಲಕ ಮೀನುಗಾರರಿಗೆ ನೆರವಾಗಬೇಕು ಎಂದು ಅಲ್ಪಸಂಖ್ಯಾತ ಮೀನುಗಾರಿಕಾ ಬೋಟ್ ಮಾಲಕರು ಆಗ್ರಹಿಸಿದ್ದಾರೆ.

ನಗರದ ಪ್ರೆಸ್ ಕ್ಲಬ್ ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ಆಗ್ರಹ ಮಾಡಿರುವ ಟ್ರಾಲ್ ಬೋಟ್ ಮಾಲಕರ ಸಂಘದ ಕೋಶಾಧಿಕಾರಿ ಅಬೂಬಕರ್ ಅಶ್ರಫ್, ಸಂಘದಡಿ 500 ಮೀನುಗಾರಿಕಾ ದೋಣಿಗಳು ಕಾರ್ಯ ನಿರ್ವಹಿಸುತ್ತಿವೆ. ಈಗಾಗಲೇ ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರವು ತೈಲ ಪೂರೈಕೆಯಲ್ಲಿ ಯಾವುದೇ ರೀತಿಯ ತೊಂದರೆ ಇಲ್ಲ ಎಂದು ಹೇಳಿದ್ದರೂ ಅಲ್ಪಸಂಖ್ಯಾತ ಮೀನುಗಾರಿಕಾ ದೋಣಿಗಳ ಪಂಪ್ ನಲ್ಲಿ ಲೀಟರೊಂದಕ್ಕೆ 8 ರೂ. ಹೆಚ್ಚುವರಿ ಹಣ ಪಡೆಯಲಾಗುತ್ತಿದೆ ಎಂದು ಆರೋಪಿಸಿದರು. ಮೀನಿನ ಕೊರತೆಯಿಂದಾಗಿ ಆಳ ಸಮುದ್ರ ಮೀನುಗಾರಿಕೆಗೆ ಶೇ.20ರಷ್ಟು ಮಾತ್ರವೇ ದೋಣಿಗಳು ತೆರಳುತ್ತಿವೆ.
ಹಾಗಿದ್ದರೂ ಅಲ್ಪಸಂಖ್ಯಾತ ಮೀನುಗಾರಿಕಾ ದೋಣಿಗಳಿಗ ಡೀಸೆಲ್ ಸಮಸ್ಯೆ ಎದುರಾಗಿದೆ ಎಂದು ಹೇಳಿದ ಅವರು, ಅಲ್ಪಸಂಖ್ಯಾತ ಪ್ರಾಥಮಿಕ ಮೀನುಗಾರಿಕ ಸಂಘವು ಎಲ್ಲಾ ಬೋಟ್ ಮಾಲಕರಿಗೆ ಸದಸ್ಯತ್ಯ ನೀಡಬೇಕು ಹಾಗೂ ಮಹಾಸಭೆ ನಡೆಸಬೇಕು. ಆದಾಯದ ಪಾಲನ್ನು ಬಡ ಮೀನುಗಾರರ ಕಲ್ಯಾಣಕ್ಕೆ ಉಪಯೋಗಿಸಬೇಕು ಎಂದು ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಬೋಟು ಮಾಲಕರಾದ ತ್ವಯ್ಯಿಬ್ ಅಹ್ಮದ್, ಅಬ್ದುಲ್ ರಹ್ಮಾನ್ ಝಾಹಿರ್, ಫೈಝಲ್ ಅಬ್ದುಲ್ ರಹ್ಮಾನ್, ಅಬ್ದುಲ್ ಗಫೂರ್, ಮುಹಮ್ಮದ್ ಅಜ್ಮಲ್ ಉಪಸ್ಥಿತರಿದ್ದರು.