ಬೆಳ್ತಂಗಡಿ, ಏ. 12 (DaijiworldNews/TA): ಉದ್ಯಮಿ ಸುದೀಪ್ ರೈ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಪತ್ನಿ ಸೌಮ್ಯ ಶೆಟ್ಟಿ (28)ಯನ್ನು ಕಾರ್ಕಳ ಪೊಲೀಸರು ಬಂಧಿಸಿದ್ದಾರೆ.

ಮೂಲತಃ ಪುತ್ತೂರು ನೆಲ್ಯಾಡಿ ನಿವಾಸಿ ಸುದೀಪ್ ರೈ ಮತ್ತು ಕಾರ್ಕಳ ಕಜೆ ನಿವಾಸಿ, ಪುತ್ತೂರು ಸಬ್ ರಿಜಿಸ್ಟ್ರಾರ್ ಕಚೇರಿ ಉದ್ಯೋಗಿ ಸೌಮ್ಯ ಶೆಟ್ಟಿ ಫೆ.17ರಂದು ರಿಜಿಸ್ಟರ್ ಮ್ಯಾರೇಜ್ ಆಗಿದ್ದರು. ಆದರೆ ಮದುವೆಯಾದ ಕೇವಲ ಒಂದು ತಿಂಗಳಲ್ಲೇ ಅಂದ್ರೆ ಮಾ.17ರಂದು ಸುದೀಪ್ ರೈ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸುದೀಪ್ ರೈ ಮಾ.30ರಂದು ಮೃತಪಟ್ಟಿದ್ದರು.
ಮಗನ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿ ಸುದೀಪ್ ಅವರ ತಂದೆ ದಾಮೋದರ ರೈ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅದರಂತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ಆರೋಪಿ ಪತ್ನಿ ಸೌಮ್ಯ ಶೆಟ್ಟಿಯನ್ನು ಬಂಧಿಸಿದ್ದಾರೆ. ‘ಮೃತರ ತಂದೆ ನೀಡಿದ ದೂರಿನಂತೆ ತನಿಖೆ ನಡೆಸಿದ್ದು, ಪ್ರಾಥಮಿಕ ಸಾಕ್ಷ್ಯಾಧಾರಗಳ ಮೇರೆಗೆ ಸೌಮ್ಯ ಶೆಟ್ಟಿ ಅವರನ್ನು ಬಂಧಿಸಲಾಗಿದೆ. ಸದ್ಯ ವಿಚಾರಣೆ ಮುಂದುವರಿದಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್ ತಿಳಿಸಿದ್ದಾರೆ.